ಪ್ರಸಂಗ : ಕೃಷ್ಣ ಸಂಧಾನ । ಪಾತ್ರ : ಶ್ರೀ ಕೃಷ್ಣ
ಪದ್ಯ: ಪರಮ ಷಡುರಸ ಭೋಜನವ ಮುರಹರನು ಭುಂಜಿಸಿ ಮೆರೆವ ಕರ್ಪರ ವೀಳ್ಯವನು ಸವಿದು ತೆರೆದರೆ ನಯನ ಭಾಸುರ ವದನದ ನಿದ್ರಾವಿಲಾಸದಿ ||
ಅಧಿಕಾರ ಬಾಹಿರರೆಂಬ ಶಾಪಕ್ಕೆ ಒಳಗಾದ ನಮ್ಮ ಯದುವಂಶವು ಪಂಗಡ ಪಂಗಡಗಳಾಗಿ ಅತೀ ನಿಕೃಷ್ಟ ಜೀವನವನ್ನು ಸಾಗಿಸುತ್ತಿರುವ ಕಾಲದಲ್ಲಿ ನನ್ನ ಯಾದವರನ್ನೆಲ್ಲಾ ಒಂದು ಗೂಡಿಸಿ ರಾಜ್ಯವನ್ನು ಕಟ್ಟಿದ ಶ್ರೇಯಸ್ಸು ಬಲರಾಮ ಕೃಷ್ಣರಾದ ನಮಗೆ ಸಲ್ಲುತ್ತದೆ. ಬಾಲ್ಯದಲ್ಲೇ ಕೆಲವು ದುಷ್ಟ ಶಕ್ತಿಗಳನ್ನು ನಿರ್ನಾಮ ಮಾಡಿ ಯಶಸ್ಸನ್ನು ಪಡೆದಾಗ ದುಷ್ಟ ನಿಗ್ರಹ, ಸಜ್ಜನ ಸಂರಕ್ಷಣೆಗಾಗಿಯೇ ನಮ್ಮ ಜನನವಾಯಿತೆಂದೂ ಅರ್ಥಾತ್ ಧರ್ಮರಕ್ಷಕರು ನಾವೆಂಬ ಭಾವನೆಯು ಲೋಕ ಪ್ರಸಿದ್ಧವಾಯಿತು. ಆದನ್ನೇ ಕರ್ತವ್ಯವೆಂದು ಭಾವಿಸಿ, ನಾವು ಮುಂದುವರಿಯುತ್ತಿರುವಾಗ ಪ್ರಜಾ ರಕ್ಷಕರಾದ ಕ್ಷತ್ರಿಯರಲ್ಲಿ ದುಷ್ಟ ಪ್ರವೃತ್ತಿಯು ಬೆಳೆಯುತ್ತಿದೆ. ಇಂತಹವರ ಸಮೂಹ ನಿರ್ನಾಮಕ್ಕಾಗಿ ಸಜ್ಜನರಾದ ಪಾಂಡವರನ್ನು ಉಪಯೋಗಿಸಿಕೊಳ್ಳಬೇಕೆಂದು ನನ್ನ ಸಂಕಲ್ಪ. ಸದ್ಯ ಪಾಂಡವ ಕೌರವರಲ್ಲಿ ಯುದ್ಧದ ಸಿದ್ಧತೆಯು ಭರದಿಂದ ಜರಗುತ್ತಿರುವ ಸಂದರ್ಭ ಹಸ್ತಿನಾವತೀಶನಾದ ಕೌರವ ಹಾಗೂ ಪಾರ್ಥರಿಬ್ಬರೂ ನನ್ನ ಗ್ರಹಾಭಿಮುಖವಾಗಿ ಬರುತ್ತಿದ್ದಾರೆ. ಇವರಿಬ್ಬರಿಗೂ ಏಕಕಾಲದಲ್ಲಿ ಸಂದರ್ಶನವೀಯುವುದು ಉಚಿತವಲ್ಲವೆನಿಸುತ್ತದೆ. ಆದ್ದರಿಂದ ನಾನು ಷಡುರಸಯುಕ್ತವಾದ ಭೋಜನದಿಂದ ತುಷ್ಟವೆನಿಸಿ ಕರ್ಪರ ಮಿಶ್ರಿತ ತಾಂಬೂಲವನ್ನು ಸವಿದು ಅಷ್ಟಮಾಂಗನೆಯರಿಂದ ಸೇವೆಯನ್ನು ಕೈಗೊಳ್ಳುತ್ತಾ ಸ್ವಲ್ಪ ನಿದ್ರಾಸಕ್ತನಾಗುವಂತೆ ನಟಿಸುತ್ತೇನೆ ನೋಡೋಣ.
ರಚನೆ: ಕೋಲ್ಯಾರು ರಾಜು ಶೆಟ್ಟಿ