ಪುರಾಣ ಲೋಕದ ಪಾತ್ರಗಳು | ಸಂಚಿಕೆ-1
ಪೃಥು
ಹಿಂದೆ ಭೂಮಿಯನ್ನು ವೇನ ಎಂಬ ರಾಜ ಆಳುತ್ತಿದ್ದ. ಈ ವೇನನು ನಾಸ್ತಿಕನೂ ದುಷ್ಟನೂ ಆಗಿದ್ದ. ಲೋಕದಲ್ಲೆಲ್ಲ ಅಧರ್ಮ ಎಷ್ಟು ಮಿತಿ ಮೀರಿತ್ತೆಂದರೆ, ಭೂಮಿಯಲ್ಲಿ ಬಿತ್ತಿದ ಬೀಜಗಳು ಮೊಳಕೆಯೇ ಬರುತ್ತಿರಲಿಲ್ಲ ಬಿತ್ತಿದ ಬೀಜಗಳನ್ನೆಲ್ಲ ಭೂಮಿಯೇ ನುಂಗುತ್ತಿತ್ತು. ಕೊನೆಗೆ ಪ್ರಜೆಗಳೆಲ್ಲ
ರೊಚ್ಚಿಗೆದ್ದು, ಒಟ್ಟಾಗಿ ವೇನನನ್ನು ಕೊಂದು ಹಾಕುತ್ತಾರೆ. ರಾಜ್ಯಕ್ಕೆ ಉತ್ತರಾಧಿಕಾರಿ ಇಲ್ಲದ ಹಾಗಾಗುತ್ತದೆ. ಆಗ ರಾಜ್ಯಕ್ಕೆ ಉತ್ತರಾಧಿಕಾರಿಯನ್ನು ಪಡೆಯಲು ಮಂತ್ರಿಗಳ ಸಲಹೆಯಂತೆ, ವೇನನ ದೇಹವನ್ನು ಮಥಿಸಿದಾಗ ಅದರಿಂದ ಹುಟ್ಟಿ ಬಂದವನೇ ಪೃಥು. ಪೃಥು ಪರಮ ಧಾರ್ಮಿಕನೂ, ದಯಾಶೀಲನೂ ಆಗಿದ್ದ. ಪೃಥು ರಾಜನಾದ ಕೂಡಲೆ ಪ್ರಜೆಗಳ ಕಷ್ಟವನ್ನು ನೋಡಿ ಮರುಗಿ ಭೂಮಿಯನ್ನು ಪ್ರಾರ್ಥಿಸಿ ಅದುವರೆಗೆ ನುಂಗಿದ್ದ ಬೀಜಗಳೆಲ್ಲ ಮರಳಿ ಮೊಳಕೆಯೊಡೆಯುವಂತೆ ಮಾಡುತ್ತಾನೆ. ಭೂಮಿ ಮತ್ತೆ ಹಿಂದಿನಂತೆ ಸಸ್ಯಶಾಮಲೆಯಾಗುತ್ತಾಳೆ. ಪ್ರಜೆಗಳಿಗೆ ಕ್ಷೇಮ ಉಂಟಾಗುತ್ತದೆ. ಹಾಗಾಗಿ ಭೂಮಿಗೆ ಪೃಥು ರಾಜನ ಮಗಳು ಎಂಬರ್ಥದಲ್ಲಿ “ಪೃಥಿವೀ” ಎಂಬ ಹೆಸರು ಬಂದಿತಂತೆ. ಪೃಥುವು ಜಗತ್ತಿನಲ್ಲಿ ಪ್ರಥಮ ಪಟ್ಟಾಭಿಷಿಕ್ತನಾದ ರಾಜರ್ಷಿ. ಇವನು ಅರ್ಚಿ ಎಂಬುವವಳನ್ನು ವಿವಾಹವಾಗಿ ಅಂತರ್ಧಾನ, ಅಂತರ್ಧಿ, ಫಲಿತ ಎಂಬ ಮಕ್ಕಳನ್ನು ಪಡೆದನು. ಪೃಥುವಿನ ರಾಜ್ಯದ ನಾಲ್ಕು ದಿಕ್ಕುಗಳಲ್ಲಿ ಕ್ರಮವಾಗಿ ಸುಧರ್ಮ,ಶಂಖಪದ, ಕೇತುಮಂತ ಮತ್ತು ಹಿರಣ್ಯರೋಮರು ಸಾಮಂತರಾಗಿ ರಾಜ್ಯಭಾರ ಮಾಡುತ್ತಿದ್ದರು.
ಸಂ.: ದಾಮೋದರ ಶೆಟ್ಟಿ, ಇರುವೈಲು