ಪ್ರಸಂಗ : ಕೃಷ್ಣ ಸಂಧಾನ | ಪಾತ್ರ : ಧರ್ಮರಾಯ
ಪದ್ಯ: ಕೇಳು ಜನಮೇಜಯನೆ ಮತ್ಸ್ಯ ನೃಪಾಲನರಮನೆಯಲಿ ಪಾಂಡವ ಬಾಲರೈವರು ಹರಿಯ ಕರುಣೆಯಲಿ ದ್ರುಪದ ಸುತ ಸಹಿತ ||
ಅರ್ಥ:
ಅಧಿಕಾರ ಐಶ್ವರ್ಯಗಳು ಮನುಷ್ಯ ಜೀವನದಲ್ಲಿ ಸ್ಥಿರವಲ್ಲವೆಂಬುದಕ್ಕೆ ಪಾಂಡವರಾದ ನಾವೇ ಉದಾಹರಣೆ. ಚಂದ್ರವಂಶದ ಕೀರ್ತಿಶಾಲಿ ಚಕ್ರವರ್ತಿಗೆ ಮಕ್ಕಳಾಗಿ ಹುಟ್ಟಿದರೂ ಚಕ್ರವರ್ತಿಯ ಮಕ್ಕಳು ಅನುಭವಿಸಬೇಕಾದ ಭೋಗ ಭಾಗ್ಯಗಳ ಅದೃಷ್ಟ ನಮ್ಮ ಪಾಲಿಗೆ ಇಲ್ಲವೆಂದೇ ಹೇಳಬಹುದು. ಹಿರಿಯರಿಂದ ದೊರೆತ ಅರ್ಧ ಸಾಮ್ರಾಜ್ಯದ ಅಧಿಕಾರದಲ್ಲಿ ನಾವು ಸುಖದಿಂದಿರುವಾಗ ನಮ್ಮ ದಾಯಾದಿಯಾದ ಕೌರವರ ಮತ್ಸರಕ್ಕೆ ಒಳಗಾಗಿ ಸರ್ವಸ್ವವನ್ನು ಕಳಕೊಂಡು ಅರಣ್ಯ ಅಜ್ಞಾತವೆಂಬ ಹದಿಮೂರು ವರುಷದ ಅವಧಿಗೆ ಕಾಡುಸೇರಬೇಕಾಯಿತು. ಶ್ರೀ ಹರಿಯ ಕರುಣೆಯಿಂದ ಅರಣ್ಯವಾಸವನ್ನು ಮುಗಿಸಿ ಆಜ್ಞಾತವಾಸವನ್ನು ಇದೇ ವಿರಾಟನಗರದಲ್ಲಿ ಯಾವ ಲೋಪವೂ ಇಲ್ಲದೆ ಕಳೆದೆವು. ನಾವು ಪಾಂಡವರೆಂದು ತಿಳಿದ ವಿರಾಟ ನಮ್ಮಿಂದ ಸೇವೆಯನ್ನು ಪಡಕೊಂಡಿದ್ದಕ್ಕೆ ತುಂಬಾ ನೊಂದು ಕ್ಷಮೆಯಾಚಿಸಿ ಉಪಪ್ಲಾವ್ಯವೆಂಬ ನಗರ ನಮಗಾಗಿ ತೆರವು ಮಾಡಿಕೊಟ್ಟಿದ್ದಾನೆ. ಅಲ್ಲದೆ ತನ್ನ ಮಗಳಾದ ಉತ್ತರೆಯನ್ನು ಅರ್ಜುನನ ಸುಪುತ್ರನಾದ ಅಭಿಮನ್ಯುವಿನೊಡನೆ ವಿವಾಹವನ್ನು ವಿಜೃಂಭಣೆಯಿಂದ ನೆರವೇರಿಸಿಕೊಟ್ಟಿದ್ದಾನೆ.
ಪರಿಣಯದ ನೆವದಿಂದ ಬಂದ ಶ್ರೀ ಹರಿ ನಮ್ಮನ್ನೆಲ್ಲಾ ಸಮಾಧಾನಪಡಿಸಿ ಸುವಿವೇಕಿಯಾದ ಓರ್ವವ್ಯಕ್ತಿಯನ್ನು ಕಳಿಸಿ ಕೌರವನಲ್ಲಿ ರಾಜ್ಯವನ್ನು ಕೇಳಬೇಕೆಂದೂ, ಅದಕ್ಕೆ ಅವನು ಒಪ್ಪದೇ ಹೋದ ಪಕ್ಕದಲ್ಲಿ ಯುದ್ಧ ಸನ್ನದ್ಧರಾಗಬೇಕಾದೀತು . ಆಗ ತನ್ನನ್ನು ಕರೆಸಿದಾಕ್ಷಣ ಬರುತ್ತೇನೆ ಎಂದು ಶ್ರೀ ಹರಿ ದ್ವಾರಕೆಗೆ ತೆರೆಳಿದ್ದಾನೆ. ಅವನ ಅಭಿಪ್ರಾಯದಂತೆ ಮುಂದುವರಿಯಲು ಇಂದು ನನ್ನ ಸಹೋದರರಾದ ಭೀಮಾರ್ಜುನ ನಕುಲ ಸಹದೇವ ಹಾಗೂ ದ್ರುಪದ ವಿರಾಟರೇ ಮುಖ್ಯರನ್ನು ಕೂಡಿಕೊಂಡು ಸಭೆಯನ್ನು ಕೊಟ್ಟಿರುತ್ತೇನೆ. ಇಲ್ಲಿಂದ ಹಸ್ತಿನಾವತಿಗೆ ಹೋಗಲು ದ್ರುಪದ ಪುರೋಹಿತರಾದ ಶತಾನಂದರೇ ಅರ್ಹರು ಎಂಬ ಸರ್ವರ ಅಭಿಪ್ರಾಯದಂತೆ ದ್ರುಪದ ಪುರೋಹಿತರನ್ನು ಸಭೆಗೆ ಕರೆಸಿದ ಹಾಗಾಯಿತು.
ಸಂ.: ರಚನೆ: ಕೋಲ್ಯಾರು ರಾಜು ಶೆಟ್ಟಿ