Written by 5:01 pm ಯಕ್ಷಗಾನ ಪೀಠಿಕಾ ಸೌರಭ

ಯಕ್ಷಗಾನ ಪೀಠಿಕಾ ಸೌರಭ | ಪ್ರಸಂಗ: ಗದಾಯುದ್ಧ । ಪಾತ್ರ: ಕೌರವ । ಸಂಚಿಕೆ-3

ಪದ್ಯ: ಕರದ ಗಧೆಯನು ಹೆಗಲೋಳಾಂತು । ಸುಯೋಧನ ।।

ಅರ್ಥ:  ಬಲಿಷ್ಠವಾದ ಬಾಹುಗಳಿಂದ ಭಾರಿ ಗದೆಯನ್ನು ಎತ್ತಿ ಬೀಸುವ ರಭಸಕ್ಕೆ ವಿರೋಧಿಗಳು ತತ್ತರಿಸಿ ತರಗೆಲೆಗಳಂತೆ ಹಾರುತ್ತಿದ್ದ ಕಾಲ ಕಳೆದು ಹೋಯಿತು. ಕುರುಸಾಮ್ರಾಟನಾದ ಸುಯೋಧನ ಭೂಪತಿ ತನ್ನ ಉರಗ ಲಾಂಛನಯುಕ್ತವಾದ ರಥಾರೋಹಕನಾಗಿ ರಣರಂಗವನ್ನು ಪ್ರವೇಶಿಸಿದಾಗ ಅವರ್ಣನೀಯವಾದ ಆನಂದದಿಂದ ಉತ್ಸಾಹ ಭರಿತರಾಗಿಕೌರವೇಶ್ವರನಿಗೆ ಜಯವಾಗಲಿಎಂದು ಸ್ವಾಗತಿಸುವ ಸೈನ್ಯ ಸಮೂಹ ಈಗಿಲ್ಲ. ನೆಲವತ್ತೆರಡು ಯೋಜನ ವಿಸ್ತೀರ್ಣವಾದ ಕುರುಭೂಮಿ ಈಗ ಕಳಾಹೀನವಾಗಿದೆ. ಪಾಂಡವರ ಪಾಳಯದಲ್ಲಿ ವಿಜಯೋತ್ಸವ ಆಚರಿಸುತ್ತಿದ್ದರೆ ಗಾತ್ರ ಪಾತ್ರದಲ್ಲಿ ಹಿರಿದಾಗಿದ್ದ ನನ್ನ ಹನ್ನೊಂದು ಆಕ್ಷೋಹಿಣಿ ಸೈನ್ಯದಲ್ಲಿ ಈಗ ಉಳಿದಿರುವವರು ಗುರುಪುತ್ರ ಆಶ್ವತ್ಥಾಮ, ಕೃಪಾಚಾರ್ಯ ಕೃತವರ್ಮಛತ್ರ ಚಾಮರ, ಕಲಶ ಕನ್ನಡಿ, ಮಂದಿ ಮಾಗಧರ ಸಂದೋಹ ಇತ್ಯಾದಿ ರಾಜ ಚಿನ್ಹೆಗಳನ್ನು ತ್ಯಜಿಸಿ ಕೈಯಾಯುಧವಾದ ಗದೆಯನ್ನು ಹೆಗಲಿಗೇರಿಸಿ ಹೆಣಗಳ ಬಣವೆಗಳನ್ನು ಉತ್ತರಿಸುತ್ತಾ ಎಕಾಂಗಿಯಾಗಿ ಪೂರ್ವಾಭಿಮುಖವಾಗಿ ಸಾಗುತ್ತಿದ್ದೇನೆ.

ಎಲ್ಲಿ ನೋಡಿದರೂ ಕಾಗೆ ಗೂಗೆಗಳು. ರಣಹದ್ದುಗಳ ಹಾರಾಟ, ಗಾಯಗೊಂಡು ಬಿದ್ದಿರುವ ಸೈನಿಕರ ಚೀರಾಟ, ಹೆಣಗಳ ಮಾಂಸಕ್ಕಾಗಿ ನರಿ ನಾಯಿಗಳ ಹೋರಾಟ, ಭೂತ ಪ್ರೇತ, ಪಿಶಾಚಿಗಳ ಮಧ್ಯೆ ನಾನೂ ಒಬ್ಬ ಪಿಶಾಚಿಯಂತೆ ರಣದಾರುಣಿಯಲ್ಲಿ ಸಂಚರಿಸುತ್ತಾ ಇದ್ದೇನೆ. ನನ್ನ ಪಾಳಯದಲ್ಲಿ ಇದ್ದವರು ಸಾಮಾನ್ಯರೇ ! ಕಾಲನನ್ನೇ ಕಟ್ಟಿ ಹಾಕಿ ಮರಣ ತನ್ನ ಇಚ್ಚಾಧೀನ ಎಂದು ಹೇಳುತ್ತಿದ್ದ ಅಜ್ಜ ಭೀಷ್ಮರು, ಶರಾದಪಿ, ಶಾಪಾದಪಿ ಎಂಬ ಉಭಯ ರೀತಿಯಲ್ಲೂ ಶತ್ರು ಸಂಹಾರಕ್ಕೆ ಸಮರ್ಥರಾಗಿದ್ದ ಆಚಾರ್ಯ ದ್ರೋಣರು, ಮಹಾರಥಿ ಕರ್ಣ, ಭಗದತ್ತ ಭೂರಿ ಶ್ರವಾದಿ ರಾಜರು, ಮಲ್ಲ ಸಾಹಸಿಗಳಾದ ತೊಂಬತ್ತೊಂಬತ್ತು ಮಂದಿ ಸಹೋದರರು, ನೂರು ಮಂದಿ ಮಕ್ಕಳು ಅದೆಷ್ಟೋ ಮಿತ್ರ ಮಹಿಷರು, ಇವರೆಲ್ಲರನ್ನೂ ಕಳಕೊಂಡ ನಿರ್ಭಾಗ್ಯನಾನಾದೆನಲ್ಲಾ. ಯುದ್ಧ ಪ್ರಾರಂಭವಾಗುವ ಮುಂಚೆ  “ರಾಜ್ಯವನ್ನು ಪಾಂಡವರಿಗೆ ಕೊಡು ಭೂಮಿ ಸ್ಥಿರವಲ್ಲಎಂದು ಉಪದೇಶವಿತ್ತ ಹಿರಿಯರಿಗೆ ಹಿತೈಷಿಗಳಿಗೆ ನಾನು ಕೊಟ್ಟ ಉತ್ತರವೇನು, “ನೆಲಕ್ಕಾಗಿ ಹೋರಾಡುವುದಿಲ್ಲ. ಛಲಕ್ಕಾಗಿ ಹೋರಾಡುತ್ತಿದ್ದೇನೆಎಂದು. ನನ್ನೊಬ್ಬನ ಛಲ ಸಾಧನೆಗಾಗಿ ಲಕ್ಷೋಪಲಕ್ಷ ಜನರ ಬಲಿಕೊಡಬೇಕಾಯಿತೇ? ಜನಕ್ಷಯಕಾರಕವಾದ ಯುದ್ಧ ಸುಯೋಧನನಿಂದಲೇ ಪ್ರಾರಂಭವಾಯಿತೆನ್ನುವವರ ಸಂಖ್ಯೆಗೇನೂ ಕೊರತೆಯಿಲ್ಲ. ಆದರೆ ಒಂದು ಕೈಯಿಂದ ಚಪ್ಪಾಳೆಯಾಗದು ತಾನೇ

ಯುದ್ಧವಾಗುವುದಕ್ಕೆ ಪಾಂಡವರು ಕಾರಣರು. ಅಪಾರ ಜನಕ್ಷಯದಿಂದ ಪ್ರಾಪ್ತಿಯಾದ ರಾಜ್ಯ ಮರುಭೂಮಿ ಸದೃಶವಲ್ಲವೇ ? ಲೆಕ್ಕದಲ್ಲಿ ಪಾಂಡವರೂ ಸೋತಿದ್ದಾರೆ. ಒಬ್ಬ ಗುರು ಅನ್ನಿಸಿಕೊಳ್ಳಬೇಕಾದರೆ ಶಿಷ್ಯ ಸಮುದಾಯದಿಂದ ಪರಿವೇಷ್ಟಿತನಾಗಿರಬೇಕು. ವೇದಾಧ್ಯಯನ ಶೀಲನಾದ ವಿಪ್ರೋತ್ತಮ ವಿದ್ವಾಂಸರಿಂದ ಮಾನ್ಯತೆಯನ್ನು ಪಡೆಯವನಾಗಿರಬೇಕು. ಹವಿಸ್ಸನ್ನು ಸ್ವೀಕರಿಸುತ್ತಿರುವ ಅಗ್ನಿಯೇ ಪೂಜಾರ್ಹವೆನಿಸುತ್ತದೆ. ನೀರಿನಾಶ್ರಯವಿದ್ದ ಭೂಮಿಯೇ ಕೃಷಿಭೂಮಿ ಎಂದೆನಿಸುತ್ತದೆ. ಹಾಗೆಯೇ ಸರ್ವ ಬಾಂಧವರೊಡನೆ ಕೂಡಿ ಬದುಕುವುದೇ ಬಾಳುವೆ ಎನಿಸುತ್ತದೆ. ಎಲ್ಲರೂ ಅಳಿದ ಮೇಲೆ ಸಾಮ್ರಾಜ್ಯ ಯಾರಿಗೆ ಬೇಕಾಗಿದೆ. ಆದರೆ ನನ್ನ ದುರ್ಗತಿಗೆ ಕಾರಣರು ಯಾರು ? ನನ್ನ ಅವಿವೇಕವೇ ?ಛೇಎಂದಿಗೂ ಅಲ್ಲ. ನನ್ನ ಜೀವನದಲ್ಲಿ ಪ್ರವೇಶಿಸಿದ ಎಲ್ಲರಿಂದಲೂ ಮೋಸಹೋದವ ನಾನಾಗಿದ್ದೇನೆ. ದೃಷ್ಟಿಯಲ್ಲಿ ಪೂಜ್ಯರೆನಿಸಿಕೊಂಡವರು ನನಗೆ ಮಾಡಿದ್ದು ಮೋಸವನ್ನಲ್ಲವೆ? ಮೋಸ ಅವರು ಮಾಡಿದ್ದಲ್ಲ. ನಾನು ಮೋಸಹೋದದ್ದು. ಭೀಮನ ಅಟ್ಟಹಾಸನ ಕರ್ಕಶ ಧ್ವನಿ ಕೇಳುತ್ತಾ ಇದೆ. ಹಿಂದೆ ನಡೆದ ಘಟನೆಗಳನ್ನು ನೆನಪಿಸುತ್ತಾ ಮರುಗುವುದರ ಬದಲು ಮುಂದೇನು ? ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಾಗಿದೆ. ನನ್ನವರೆಲ್ಲಾ ಸತ್ತರೂ ನನ್ನ ವೈರಿಗಳಾದ ಪಾಂಡವರು ಇನ್ನೂ ಜೀವಂತವಾಗಿದ್ದಾರಲ್ಲಾ ಎಂಬ ಚಿಂತೆಯಿಂದ ಶರತಲ್ಪದಲ್ಲಿ ಮಲಗಿದ್ದ ಅಜ್ಜ ಭೀಷ್ಮರಲ್ಲಿಗೆ ಹೋಗಿ ವಂದಿಸಿದಾಗ ನನ್ನ ಪರಿಸ್ಥಿತಿಯ ಬಗ್ಗೆ ಅನುಕಂಪ ತಾಳಿದ ಅವರುಇಂದಿನ ದಿನವನ್ನು ವೈಶಂಪಾಯನ ಸರೋವರದಲ್ಲಿ ಕಳೆ ನಾಳಿನ ದಿನ ನಿನ್ನದಾಗುವುದು, ಅಷ್ಟರಲ್ಲಿ ಬಲಭದ್ರನ ಆಗಮನವಾದರೂ ಆದೀತುಎಂದು ಸೂಚಿಸಿದ್ದಾರೆ. ಅಗ್ನಿಸ್ತಂಭನ ಜಲಸ್ತಂಭನಾದಿ ವಿದ್ಯೆಗಳಲ್ಲಿ ನಿಷ್ಣಾತನಾದ ನಾನು ತಡಮಾಡದೆ ವೈಶಂಪಾಯನ ಸರೋವರದ ಕಡೆಗೆ ಸಾಗುತ್ತೇನೆ.

ಸಂ.: ಕೋಲ್ಯಾರು ರಾಜು ಶೆಟ್ಟಿ

Visited 90 times, 1 visit(s) today
Close Search Window
Close