Written by 2:20 pm Articles, Featured, News

ಯಕ್ಷಲೋಕಕ್ಕೊಂದು ಮಿನುಗು ಮಿಂಚು ನೀವು | ಸಿಂಚನಾ ಜೈನ್ ಮುಟ್ಟದ ಬಸದಿ

ಯಕ್ಷಲೋಕಕ್ಕೊಂದು ಮಿನುಗು ಮಿಂಚು ನೀವು | ಮೇಘರಾಜ್ ಜೈನ್

ಸಾಗರ ತಾಲ್ಲೂಕು ಕಾರ್ಗಲ್‌ನ ಶ್ರೀ ಈರಯ್ಯ ಜೈನ್ ಹಾಗೂ ಶ್ರೀಮತಿ ಪುಟ್ಟಮ್ಮ ದಂಪತಿಗಳ ನಾಲ್ಕನೇ ಪುತ್ರನಾಗಿ 5-11-1964ರಲ್ಲಿ ಜನಿಸಿದ ಮೇಘರಾಜ್ ಜೈನ್ ರವರು 9ನೇ ತರಗತಿ ಓದುತ್ತಿದ್ದಾಗಲೇ ಯಕ್ಷಗಾನ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಇವರು ಯಕ್ಷಗಾನ ಗುರುಗಳಾದ ಶ್ರೀ ಚೂಡರತ್ನ ಜೈನ್ ಕಾರ್ಗಲ್ ಇವರಿಂದ ಚಂಡೆ, ಮದ್ದಲೆ, ಹಾಡುಗಾರಿಕೆ ಕಲಿತು ಯಕ್ಷಗಾನ ಕಲೆಯ ಬಗ್ಗೆ ತಮಗಿದ್ದ ಕಾಳಜಿ ಆ ಸಮಯದಲ್ಲಿಯೇ ತೋರಿಸಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಬೆಳೆದ ಇವರು ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ನಂತರ ಬದುಕಿಗಾಗಿ ಸಾಗರ ಶ್ರೀ ಗಜಾನನ ಸಾರಿಗೆ ಸಂಸ್ಥೆಯಲ್ಲಿ ಕಾರ್ಯ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಾ 1992 ರಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಇವರು ಗೋಳಿಗರಡಿ ಮೇಳ, ಬಗ್ವಾಡಿ ಮೇಳ, ಸಿಗಂದೂರು ಮೇಳ, ಲಕ್ಷ್ಮೀನಾರಾಯಣ ಯಕ್ಷಗಾನ ಮಂಡಳಿ,  ಮಾರುತಿ ಯಕ್ಷಗಾನ ಮಂಡಳಿ ಬೇಡ್ಕಣಿ, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಮುಂತಾದ ಮೇಳಗಳಲ್ಲಿ ಚಂಡೆ ಹಾಗೂ ಮದ್ದಲೆ ವಾದಕರಾಗಿ ಕರ್ತವ್ಯ ನಿರ್ವಹಿಸುಸಿದ್ದಾರೆ.

ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರದ ಸಂಗೀತ ಮತ್ತು ನಾಟಕ ವಿಭಾಗ, ಬೆಂಗಳೂರು ಇದರ ನೋಂದಾಯಿತ ಕಲಾ ತಂಡವಾದ ಯಕ್ಷ ಬಳಗ ತುಮರಿ ಇದರಲ್ಲಿ ಸುಮಾರು 10 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಶ್ರೀ ಕ್ಷೇತ್ರ ಸೋಮವಾರಸಂತೆ ಮೇಳದಲ್ಲಿ ಕಳೆದ ಮೂರು ವರ್ಷಗಳಿಂದ ಚಂಡೆ ಹಾಗೂ ಮದ್ದಲೆ ವಾದಕರಾಗಿ ನಿಷ್ಠಾವಂತ ಹಾಗೂ ಶಿಸ್ತುಬದ್ಧ ಕಲಾವಿದನಾಗಿ ಮೇಳದ ಘನತೆ-ಗೌರವವನ್ನು ಕಾಪಾಡಿ ಕರ್ತವ್ಯ ನಿರ್ವಹಿಸಿರುವ ತಮ್ಮನ್ನು ತೊಡಗಿಸಿಕೊಂಡಿರುವುದಕ್ಕೆ ಮೇಳದ 125ರ ಸಂಭ್ರಮ ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಿರುವುದು ಹರ್ಷವೇ ಸರಿ.

ತಂದು ಹಾಕದವನು ತಂದೆಯಾದರೇನು?
ಮಾಡಿ ಹಾಕದವಳು ಮಾತೆಯಾದರೇನು?
ಮರ್ಮ ಅರಿಯದವಳು ಮಡದಿಯಾದರೇನು?
ಗುಣವರಿಯದವನು ಗಂಡನಾದರೇನು?
ಸಹಾಯ ಮಾಡದವನು ಸ್ನೇಹಿತನಾದರೇನು?
ಮಾನ ಕಾಯದವಳು ಮಗಳಾದರೇನು?
ಮನೆಗಾಗದವನು ಮಗನಾದರೇನು?
ಜೀವನದ ಪ್ರತಿಯೊಂದು ಪಾತ್ರಕ್ಕೂ ಒಂದೊಂದು ಗಾತ್ರವಿದೆ.
ಅರಿತು ನಡೆದರೆ ಬಾಳ ನಾಟಕ ಸುಂದರ!
ಇದನ್ನರಿತು ವರ್ತಿಸಿದರೆ ಜೀವನವೊಂದು ಅದ್ಭುತ ಗೋಪುರ!
ಎಂಬ ಮಾತಿನಂತೆ ಸುಂದರ ಸಂಸಾರ ಇವರದು ಹೆಂಡತಿ ಚಂದ್ರಕಲಾ ಜೈನ್ ಇಬ್ಬರು ಗಂಡು ಮಕ್ಕಳು ಶ್ರೇಣಿಕ್ ಮತ್ತು ಶರತ್ ಜೈನ್. ಇವರ ಮಕ್ಕಳನ್ನು ಗುರುತಿಸುವಾಗ ಚಂಡೆ ಮೇಘಣ್ಣನ ಮಕ್ಕಳೇ ಎಂದು ಗುರುತಿಸುವುದು ವಿಶೇಷವಾಗಿದೆ. ತಂದೆಯಂತೆ ಮಗನೆಂಬಂತೆ ಮಗನಾದ ಶರತ್ ಜೈನ್ ಇವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಬೆಳಕಿಗೆ ಬರುತ್ತಿದ್ದಾರೆ. ತೇಜಸ್ಕಿಡಿಗಳು ಕೇಳಿಯೇ ಇರುತ್ತೀರಿ  ಇದೊಂದು ಮಾತು ಸಾಮ್ಯವಾಗುವಂತಿದೆ.

“ಯೋಚಿಸಿದಷ್ಟು ಪರಿಸರ ರಹಸ್ಯಮಯವಾಗುತ್ತದೆ. ಸಂಪೂರ್ಣವಾಗಿ ತಿಳಿಯುತ್ತೇನೆಂದು ಹೊರಡುವುದು ಮೂರ್ಖತನವೇ ಸರಿ. ಸುಮ್ಮನೆ ನಮಗೆ ಅಗತ್ಯ ಇದ್ದಷ್ಟು ಮಾತ್ರ ತಿಳಿದುಕೊಂಡು, ಮಿಕ್ಕುದನ್ನು ನೋಡಿ ಅಚ್ಚರಿಪಡುತ್ತ ಇದ್ದು ಬಿಡುವುದು ಒಳ್ಳೆಯದು.” ಎಂಬ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ  ಮಾತಿನಂತೆ ನಡೆದ ಇವರು ಯಕ್ಷಗಾನದ ಪ್ರತಿ ಹಿಮ್ಮೇಳದ ಪಾತ್ರಕ್ಕೂ ತಮ್ಮದೇ ವೈಖರಿಯ ರೂಪುರೇಷೆ ನೀಡಿದವರು.  ಉದಾತ್ತ ವಿಚಾರಗಳನ್ನು ಮೈಗೂಡಿಸಿಕೊಂಡು ಜೀವನವನ್ನು ನಡೆಸುತ್ತಿರುವ ನಿಮಗೆ ಶತಕೋಟಿ ನಮನಗಳು. ಇವರ ದಾರ್ಶನಿಕತೆ ಹೇಳತಿರದು. ಒಂದು ಮಾತನ್ನು ಕೇಳಿಯೇ ಇರುತ್ತೀರಿ “ಹೆಚ್ಚು ತಿಳಿದಂತೆಲ್ಲ ತಿಳಿಯುವ ಅಂಶವೇನೆಂದರೆ ಈವರೆಗೆ ನಾ ತಿಳಿದದ್ದು ಅಲ್ಪ ಎಂಬಂತೆ” ಈ ನಿಲುವನ್ನು ಅಳವಡಿಸಿಕೊಂಡ ಇವರು ಸಾಮಾನ್ಯ ವ್ಯಕ್ತಿಯಂತೆ ಗುರುತಿಸಿಕೊಂಡು ಸತತ 15ಕ್ಕಿಂತ ಹೆಚ್ಚು ವರ್ಷಗಳಿಂದ ಉಚಿತವಾಗಿ ಆಸಕ್ತರಿಗೆ ಯಕ್ಷಗಾನ ತರಬೇತಿ ನೀಡುತ್ತಾ ಬಂದಿದ್ದಾರೆ.

ಯಕ್ಷಲೋಕಕ್ಕೊಂದು ಮಿನುಗು ಮಿಂಚು ನೀವು! ಯಶಸ್ವಿ ಭವ!

 

ಲೇ.: ಸಿಂಚನಾ ಜೈನ್ ಮುಟ್ಟದ ಬಸದಿ

 

Visited 194 times, 1 visit(s) today
Close Search Window
Close