ಹೊನ್ನಾವರ : ಪ್ರತಿವರ್ಷ ನಡೆಯುವ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಮಾರ್ಚ್ ೧೬ರಿಂದ ನಡೆಯಲಿದ್ದು ಶತಾವಧಾನಿ ಆರ್.ಗಣೇಶರಿಗೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ ಹಾಗೂ ಎಂ.ಎಲ್.ಸಾಮಗರಿಗೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಇಡಗುಂಜಿ ಮೇಳದ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ.
ಅಲ್ಲದೆ, ಮಾರ್ಚ್ ೧೬ರಿಂದ ೨೦ರ ವರೆಗೆ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕರ್ನಾಟಕ, ಕೇರಳ ಮುಂತಾದ ರಾಜ್ಯಗಳಿಂದ ಕಲಾತಂಡಗಳು ಪಾಲ್ಗೊಳ್ಳಿದ್ದು, ಶಾಲಾ ಮಕ್ಕಳಿಗಾಗಿ ತುಮರಿಯ ತಂಡದಿಂದ ಅನ್ಯಾಳ ಡೈರಿ ನಾಟಕ ಪ್ರದರ್ಶನ ನಡೆಯಲಿದೆ. ಕಲಾಗಂಗೋತ್ರಿಯವರಿಂದ ನಡೆಯುವ ನಾಟಕ ಪ್ರದರ್ಶನದಲ್ಲಿ ಮುಖ್ಯ ಪಾತ್ರದಲ್ಲಿ ಸಿನೆಮಾ ನಟ ಹಾಗೂ ರಂಗಕರ್ಮಿ ಮುಖ್ಯಮಂತ್ರಿ ಚಂದ್ರು ಭಾಗವಹಿಸುತ್ತಿರುವುದು ವಿಶೇಷವಾಗಿದೆ.