Written by 9:16 am ಪುರಾಣ ಲೋಕದ ಪಾತ್ರಗಳು

ಮಾಧವಿ । ಪುರಾಣ ಲೋಕದ ಪಾತ್ರಗಳು । ಸಂಚಿಕೆ – 6

ಮಾಧವಿ । ಪುರಾಣ ಲೋಕದ ಪಾತ್ರಗಳು । ಸಂಚಿಕೆ – 6

ಈಕೆ ರಾಜಾ ಯಯಾತಿಯ ಮಗಳು. ಒಮ್ಮೆ ಗಾಲವ ನೆಂಬ ಒಬ್ಬ ವಟು ವಿಶ್ವಾ ಮಿತ್ರನಲ್ಲಿ ಶುಕ್ಲಯಜುರ್ವೇ ದವನ್ನು ಸಾಂಗವಾಗಿ ಅಧ್ಯಯನ ಮಾಡಿ ಮುಗಿಸಿ ಹೊರಡುವಾಗ, ನಾನು ಏನು ಗುರುದಕ್ಷಿಣೆ ಕೊಡಲಿ ಗುರುಗಳೇ ಎಂದಾಗ ವಿಶ್ವಾಮಿತ್ರನು ನಿನ್ನ ಸೇವೆಯಿಂದ ನಾನು ತೃಪ್ತನಾಗಿದ್ದೇನೆ ನನಗೆ ಏನೂ ಬೇಡ ಅಂದರೂ ಕೇಳದೆ ಗಾಲವ ಮತ್ತೆ ಮತ್ತೆ ಒತ್ತಾಯಿಸಿದಾಗ “ಹಾಗಾದರೆ ಮೈಯೆಲ್ಲ ಬೆಳ್ಳಗೆ ಒಂದು ಕಿವಿ ಮಾತ್ರ ಕಪ್ಪಾಗಿರುವ 800 ಕುದುರೆಗಳನ್ನು ತಂದೊಪ್ಪಿಸು” ಎಂದನು. ಅಂತಹ ಕುದುರೆಗಳು ಎಲ್ಲಿ ಸಿಗಬಹುದು, ವಿಶ್ವಾಮಿತ್ರರಂತಹ ಸನ್ಯಾಸಿಗೆ ಅವುಗಳಿಂದ ಏನು ಉಪಯೋಗ ಎನ್ನುವುದು ಗಾಲವನಿಗೆ ತಿಳಿಯದು. ಈಗ ಗಾಲವನ ಪರಿಸ್ಥಿತಿ ಕೋಲು ಕೊಟ್ಟು ಪೆಟ್ಟು ತಿಂದ ಹಾಗಾಯಿತು.
ಪ್ರತಿಷ್ಠಾನಪುರದ ರಾಜನಾದ ಯಯಾತಿಯಲ್ಲಿ ಅಂತಹ ಕುದುರೆಗಳಿರಬಹುದೆಂದು ಗ್ರಹಿಸಿ ಗಾಲವ ಅವನಲ್ಲಿಗೆ ಹೋಗುತ್ತಾನೆ. ಆಗ ಯಯಾತಿಯು ತನ್ನ ಬಳಿ ಅಂತಹ ಒಂದೂ ಕುದುರೆ ಇಲ್ಲ, ಆದರೆ ಒಂದು ಪರಿಹಾರ ಇದೆ, ನನ್ನ ಪುತ್ರಿ ಮಾಧವಿಯನ್ನು ನಿನಗೆ ಒಪ್ಪಿಸುತ್ತೇನೆ . ಇವಳನ್ನು ಯಾವ ರಾಜನಿಗಾದರೂ ಕೊಟ್ಟು ಕುದುರೆಗಳನ್ನು ಸಂಪಾದಿಸುವಂತೆ ತಿಳಿಸಿ ಸುಗುಣಿ-ಸುಂದರಿ ಪುತ್ರಿ “ಮಾಧವಿ”ಯನ್ನು ಗಾಲವನಿಗೆ ಒಪ್ಪಿಸುತ್ತಾನೆ. ಗಾಲವ ಅವಳನ್ನು ಕರೆದುಕೊಂಡು ಹರ್ಯಶ್ವ ಎಂಬ ರಾಜನಲ್ಲಿಗೆ ಹೋಗಿ ಮಾಧವಿಯನ್ನು ಒಂದು ವರ್ಷದ ಮಟ್ಟಿಗೆ ಒಪ್ಪಿಸಿ, ಅವನಲ್ಲಿದ್ದ 200 ಕುದುರೆಗಳನ್ನು ಪಡೆದನು. ಹರ್ಯಶ್ವನಿಗೆ ಮಾಧವಿಯಲ್ಲಿ “ವಸುಮಾನ” ಎಂಬ ಪುತ್ರನಾದಮೇಲೆ, ವರ್ಷದ ನಂತರ ಮಾಧವಿಯನ್ನು ಅಲ್ಲಿಂದ ಒಯ್ದು, ಕಾಶೀ ರಾಜನಾದ ದಿವೋದಾಸನಲ್ಲಿ ಅಂತಹ ಇನ್ನೂರು ಕುದುರೆಗಳಿವೆ ಎಂದು ತಿಳಿದು, ಆತನಿಗೆ ಒಂದು ವರ್ಷಕ್ಕೆ ಮಾಧವಿಯನ್ನು ಕೊಟ್ಟು 200 ಕುದುರೆ ಪಡೆಯುತ್ತಾನೆ. ದಿವೋದಾಸನಿಂದ ಮಾಧವಿಗೆ
“ಪ್ರತರ್ದನ” ಎಂಬ ಮಗ ಹುಟ್ಟಿದ. ಒಂದು ವರ್ಷದ ಬಳಿಕ ಮಾಧವಿಯನ್ನು ಕರೆದೊಯ್ದು ಭೋಜ ರಾಜನಾದ ಉಶೀನರನಿಗೆ ಕೊಟ್ಟು ಅವನಿಂದಲೂ 200 ಕುದುರೆಗಳನ್ನು ಪಡೆದನು. ಉಶೀನರನಿಗೆ ಮಾಧವಿಯಲ್ಲಿ “ಶಿಬಿ” ಎಂಬ ಮಗನು ಜನಿಸುತ್ತಾನೆ. ಪ್ರತಿ ಸಲವೂ ಹುಟ್ಟಿದ ಮಗುವನ್ನು ಅಲ್ಲೇ ಬಿಟ್ಟು ಮಾಧವಿಯನ್ನು ಮಾತ್ರಾ ಕರೆದೊಯ್ಯಬಹುದು, ಇದು ಗಾಲವ ಮಾಡಿಕೊಂಡಿರುವ ಕರಾರು. ಕೊನೆಗೂ ಉಳಿದ 200 ಕುದುರೆಗಳು ಎಲ್ಲಿಯೂ ಸಿಗದಿದುರಿಂದ, ನಿರಾಶನಾದ ಗಾಲವ, ವಿಶ್ವಾಮಿತ್ರರಿಗೆ 600 ಕುದುರೆಗಳನ್ನು ಕೊಟ್ಟು, ಉಳಿದ 200 ಕುದುರೆಗಳಿಗೆ ಬದಲಾಗಿ ಮಾಧವಿಯನ್ನೇ ಸ್ವೀಕರಿಸಬೇಕೆಂದು ವಿಶ್ವಾಮಿತ್ರರಲ್ಲಿ ಪ್ರಾರ್ಥಿಸುತ್ತಾನೆ. ವಿಶ್ವಾಮಿತ್ರರು ಮಾಧವಿಯನ್ಮು ಸ್ವೀಕರಿಸಿ ಮಾಧವಿಯಲ್ಲಿ “ಅಷ್ಟಕ”ನೆಂಬ ಮಗನನ್ನು ಪಡೆದರು. ಗಾಲವ ದಾನವಾಗಿ ಪಡೆದ ಮಾಧವಿಯನ್ನು ಉಪಯೋಗಿಸಿ ಗುರುದಕ್ಷಿಣೆಯನ್ನು ಸಂದಾಯಮಾಡಿ ಋಣ ಮುಕ್ತನಾಗುತ್ತಾನೆ. ಕೊನೆಗೆ ಆಕೆಯನ್ನು ಮರಳಿ ಯಯಾತಿ ಮಹಾರಾಜನ ಆಸ್ಥಾನಕ್ಕೆ ಕರೆತಂದು ಅವನಿಗೆ ಒಪ್ಪಿಸಿ ಹೊರಡುತ್ತಾನೆ. ಗಾಲವನಿಗೆ ತನ್ನ ಗುರುಗಳಿಗೆ ದಕ್ಷಿಣೆಯನ್ನು ಸಲ್ಲಿಸುವುದೊಂದೇ ಗುರಿಯಾಗಿದ್ದು ಬಡಪಾಯಿ ಮಾಧವಿಯ ಬಗ್ಗೆ ಯಾವ ಭಾವನೆಯೂ ಇರುವುದಿಲ್ಲ. ಈಗ ಯಯಾತಿಗೂ ತನ್ನ ಮಗಳಿಗೆ ವಿವಾಹ ಮಾಡಿ ಕೈ ತೊಳೆದುಕೊಂಡು ಬಿಟ್ಟರೆ ತನ್ನ ಕರ್ತವ್ಯ ಮುಗಿದಂತೆ ಎಂದು ಭಾವಿಸಿ ಆಕೆಗೊಂದು ಸ್ವಯಂವರವನ್ನು ಏರ್ಪಾಡುಮಾಡುತ್ತಾನೆ. ಆದರೆ ಸ್ವಯಂವರದ ದಿನ, ಮಾಧವಿ ಅಲ್ಲಿ ನೆರೆದಿದ್ದ ಯಾವುದೇ ರಾಜರಿಗೆ ವರಮಾಲೆ ಹಾಕದೇ ಹಿಂದಿನ ವರ್ಷಗಳಲ್ಲಿ ತಾನು ಅನುಭವಿಸಿದ ನೋವನ್ನು ‌ನೆರೆದ ಎಲ್ಲರೆದುರಿಗೆ ಎಳೆ ಎಳೆಯಾಗಿ ವಿವರಿಸಿ, ವರಮಾಲೆಯನ್ನು ಅಲ್ಲೇ ಬಿಸುಟು, ಒಬ್ಬಂಟಿಯಾಗಿ ನಡೆಯುತ್ತಾ ಅರಣ್ಯವನ್ನು ಪ್ರವೇಶಿಸುತ್ತಾಳೆ.
(ಪುರಾಣಗಳಲ್ಲಿ ನನ್ನನ್ನು ಬಹುವಾಗಿ ಕಾಡಿದ ಪಾತ್ರ ಮಾಧವಿಯದು. ನಾನು ಇನ್ನೂ ಆ ಗುಂಗಿನಿಂದ ಹೊರಬಂದಿಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಹೇಗೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾಳೆ, ಹೇಗೆ ಅವಳ ಸ್ವಾತಂತ್ರ್ಯವನ್ನು ಹರಣ ಮಾಡಿ ಪುರುಷನು ತನ್ನ ತೀಟೆಗಾಗಿ ಅವಳನ್ನು ಬಳಸಿಕೊಂಡು ಅವಳ ಬದುಕನ್ನು ನರಕ ಸದೃಶ ಮಾಡಿಸುತ್ತಾನೆ ಎನ್ನುವ ಹೃದಯವಿದ್ರಾವಕ ಕಥೆ ಮಾಧವಿಯದು. ಯಜುರ್ವೇದವನ್ನು ಕಲಿಸಿದ ಗುರು ವಿಶ್ವಾಮಿತ್ರರು, ಶಿಷ್ಯ ಗಾಲವ, ತಂದೆ ಯಯಾತಿ, ಅವಳಲ್ಲಿ ಮಕ್ಕಳನ್ನು ಪಡೆದ ಮೂವರು ರಾಜರು, ಇವರ್ಯಾರೂ ಮಾಧವಿಯ ಮನಸ್ಥಿತಿಯನ್ನು ಅರ್ಥೈಸದೆ ಅವಳನ್ನು ಒಂದು ಸರಕಿನಂತೆ ಉಪಯೋಗಿಸಿದುದು ಬಹು ದೊಡ್ಡ ದುರಂತ. ಯತ್ರ ನಾರ್ಯಸ್ತು ಪೂಜ್ಯಂತೇ ತತ್ರ ರಮಂತೇ ದೇವತಾ ಎನ್ನುವ ಮಾತು ಎಲ್ಲಿ ಉಳಿಯಿತು? )

ಸಂ: ದಾಮೋದರ ಶೆಟ್ಟಿ, ಇರುವೈಲು
ಮೊ.: 98203 93098

Visited 54 times, 1 visit(s) today
Close Search Window
Close