Written by 3:28 am ಪುರಾಣ ಲೋಕದ ಪಾತ್ರಗಳು

ರುರು ಪ್ರಮದ್ವರೆ | ಪುರಾಣ ಲೋಕದ ಪಾತ್ರಗಳು | ಸಂಚಿಕೆ – 7

ರುರು ಪ್ರಮದ್ವರೆಯರ ಪ್ರೇಮ ಕಥೆ

ಈ ಕತೆಯು ಮಹಾಭಾರತದ ಆದಿಪರ್ವದಲ್ಲಿ ಬಂದಿದೆ. ಗಂಧರ್ವನಾದ ವಿಶ್ವಾವಸು ಅಪ್ಸರೆಯಾದ ಮೇನಕೆಯನ್ನ ಕೂಡಿದಾಗ ಆಕೆ ಗರ್ಭವತಿಯಾಗುತ್ತಾಳೆ.. ಅವಳಿಗೆ ಹುಟ್ಟಿದ ಮಗುವನ್ನ ಆಕೆ ಸ್ಥೂಲಕೇಶರೆಂಬ ಮಹರ್ಷಿಗಳ ಆಶ್ರಮದ ಪಕ್ಕದಲ್ಲಿ ಬಿಟ್ಟು ದೇವಲೋಕಕ್ಕೆ ಮರಳುತ್ತಾಳೆ. ಆ ಪುಟ್ಟ ಮುದ್ದಾದ ಮಗುವನ್ನ ಆಶ್ರಮಕ್ಕೆ ತಂದು ತನ್ನದೇ ಮಗಳಂತೆ ಸಾಕುವ ಸ್ಥೂಲಕೇಶರು ಆ ಮಗುವಿಗೆ ” ಪ್ರಮಧ್ವರಾ ” ( ಹೆಂಗಸರಲ್ಲಿ ಶ್ರೇಷ್ಠಳು ) ಎನ್ನುವ ನಾಮಕರಣ ಮಾಡುತ್ತಾರೆ.. ದಿನವು ಕಳೆಯುತ್ತಿದ್ದಂತೆ ಹುಣ್ಣಿಮೆಯ ಚಂದ್ರನಂತೆ ಬೆಳೆಯುತ್ತಾ ಬೆಳೆಯುತ್ತಾ ಪ್ರಮಧ್ವರೆಯು ಅಪ್ರತಿಮ ಸುಂದರಿಯಾಗಿ ಬೆಳೆದು ನಿಲ್ಲುತ್ತಾಳೆ.

ಇಂತಹಾ ಚೆಲುವಿನ ಗಣಿಯನ್ನ ಒಮ್ಮೆ ರುರುವು ನೋಡಿ ಮೋಹಿತನಾಗುತ್ತಾನೆ… ಈ ರುರು ಅನ್ನುವವ ಭೃಗು ವಂಶಜ. ಭೃಗುವಿನ ಪುತ್ರನಾದ ಚ್ಯವನನ ಮೊಮ್ಮಗ. ಅಂದರೆ ಚ್ಯವನನ ಮಗನಾದ ಪ್ರಮತಿಗೆ ಅಪ್ಸರೆಯಾದ ಘೃತಾಚಿಯಲ್ಲಿ ಹುಟ್ಟಿದ ಮಗ. ತನ್ನ ಮನದ ಕಾಮನೆಯನ್ನ ತನ್ನ ತಂದೆಯ ಬಳಿ ಹೇಳಿಕೊಳ್ಳುತ್ತಾನೆ ರುರು.. ತನ್ನ ಮಗನ ಇಚ್ಛೆಯನ್ನು ಈಡೇರಿಸುವ ಸಲುವಾಗಿ ಪ್ರಮತಿಯು ಸ್ಥೂಲಕೇಶರ ಬಳಿ ಸಾಗಿ ತನ್ನ ಮಗನಿಗೆ ನಿಮ್ಮ ಮಗಳನ್ನು ಧಾರೆ ಎರೆದು ಕೊಡುವಿರಾ ? ಎಂದು ಕೇಳುತ್ತಾನೆ. ತನ್ನ ಸಾಕು ಮಗಳಿಗೆ ಈತನಿಗಿಂತ ಯೋಗ್ಯನಾದ ವರ ಸಿಗಲಾರನೆಂದು ಯೋಚಿಸಿದ ಸ್ಥೂಲಕೇಶರು ಮುಂದಿನ ಉತ್ತರ ಫಲ್ಗುನೀ ನಕ್ಷತ್ರದಂದು ವಿವಾಹ ಮಾಡಿಕೊಡುವುದಾಗಿ ನಿಶ್ಚಿತಾರ್ಥ ಮಾಡುತ್ತಾರೆ..

ಆದರೆ ವಿಧಿಯ ಆಟವೋ ಎಂಬಂತೆ… ವಿವಾಹಕ್ಕೆ ಸ್ವಲ್ಪ ದಿನಗಳಿರುವಂತೆಯೇ ಒಂದು ದಿನ ವಿಹಾರಾರ್ಥವಾಗಿ ಪ್ರಮಧ್ವರೆಯು ವನದಲ್ಲಿ ಸಂಚರಿಸುತ್ತಿದ್ದಾಗ ಮಲಗಿದ್ದ ಸರ್ಪವೊಂದನ್ನ ಗೊತ್ತಿಲ್ಲದೇ ತುಳಿದು ಬಿಡುತ್ತಾಳೆ.. ಸರ್ಪವು ಒಡನೆಯೇ ಆಕೆಯನ್ನ ಕಚ್ಚಿ ತನ್ನಲ್ಲಿದ್ದ ವಿಷವನ್ನೆಲ್ಲಾ ಆಕೆಯ ದೇಹದಲ್ಲಿ ಸೇರಿಸಿಬಿಡುತ್ತದೆ.. ನೋಡು ನೋಡುತ್ತಿದ್ದಂತೆ ಪ್ರಮಧ್ವರೆಯು ನೋವಿನಿಂದ ಅರಚುತ್ತಾ ಕುಸಿದು ಬೀಳುತ್ತಾಳೆ. ಕ್ಷಣಕಾಲ ಕಳೆದೊಡನೆ ತನ್ನ ಪ್ರಾಣವನ್ನೂ ಕಳೆದುಕೊಳ್ಳುತ್ತಾಳೆ… ಸುದ್ದಿಯು ಎಲ್ಲೆಡೆ ಹರಡಿ ಸ್ಥೂಲಕೇಶರು ಅಲ್ಲಿಗೆ ಆಗಮಿಸುತ್ತಾರೆ. ಅಸುವೇ ಇರದ ಮಗಳ ದೇಹವು ನೆಲದಲ್ಲಿರುತ್ತದೆ… ಇತ್ತ ರುರುವಿಗೂ ಈ ವಿಚಾರ ತಿಳಿದು ಆತನೂ ಅಲ್ಲಿಗೆ ಓಡೋಡಿ ಬರುತ್ತಾನೆ… ತಾನು ಬಹುವಾಗಿ ಪ್ರೀತಿಸಿದ ಪ್ರಮಧ್ವರೆಯನ್ನು ಶವವಾಗಿ ನೋಡಲಾಗದ ಆತನು ರೋಧಿಸುತ್ತಾ ಅಲ್ಲಿಂದ ಕಾನನದೊಳಗೆ ಓಡಿಹೋಗುತ್ತಾನೆ.
ದಟ್ಟ ಕಾನನದ ನಡುವೆ ಬಿಕ್ಕಿ ಬಿಕ್ಕಿ ಅಳುತ್ತಾ, ತನ್ನ ಜೀವನವೇ ನರಕಮಯವಾಗಿ ಹೋಯಿತಲ್ಲ ಎಂದು ಸಂಕಟ ಪಡುತ್ತಾನೆ. ವಿರಹವನ್ನ ತಡೆಯಲಾಗದ ರುರುವು ಆಗಸವನ್ನ ದಿಟ್ಟಿಸುತ್ತಾ, ” ನಾನೇನಾದರೂ ದಾನ ಮಾಡಿದ್ದರೆ, ತಪವನ್ನಾಚರಿಸಿದ್ದರೆ.. ತಂದೆ ತಾಯಿ ಗುರುಗಳನ್ನು ನಿಷ್ಠೆಯಿಂದ ಶುಶ್ರೂಷೆ ಮಾಡಿದ್ದೇ ಆಗಿದ್ದಲ್ಲಿ ನನ್ನ ಪ್ರಾಣಕಾಂತೆಯಾದ ಪ್ರಮಧ್ವರೆಯು ಬದುಕಿ ಬರಲಿ. ನಾನು ಬ್ರಹ್ಮಚರ್ಯ ವ್ರತವನ್ನ ಅನುಷ್ಠಾನ ಗೊಳಿಸಿದ್ದು ನಿಜವೇ ಆಗಿದ್ದಲ್ಲಿ ನನ್ನ ಪ್ರಮಧ್ವರೆಯು ಬದುಕಿ ಬರಲಿ. ” ಎಂದು ಜೋರಾಗಿ ಕೂಗುತ್ತಾನೆ. ಆತನ ರೋಧನೆಯನ್ನ ಕಂಡು ಮನಕಲುಕಿದ ದೇವತೆಗಳು ದೇವದೂತನೋರ್ವನನ್ನು ಆತನ ಬಳಿಗೆ ಕಳುಹಿಸುತ್ತಾರೆ…

ದೇವದೂತನು , ” ಋಷಿಪುತ್ರ, ನಿನ್ನೀ ಮಾತುಗಳಿಂದ ಯಾವುದೇ ಪ್ರಯೋಜನವಾಗದು.. ಆಯುಷ್ಯವೆನ್ನುವುದು ಮುಗಿದ ಬಳಿಕ ಈ ಲೋಕದಿಂದ ಎಲ್ಲರೂ ಮರಳಲೇಬೇಕು… ಪ್ರಾಣ ಕಳೆದುಕೊಂಡವರು ಮರಳಿ ಬದುಕುವುದು ಸಾಧ್ಯವಾಗದ ಮಾತು. ನಿನ್ನ ಪ್ರಾಣಕಾಂತೆಯ ಆಯುಷ್ಯವು ತೀರಿ ಹೋಗಿದೆ. ಹಾಗಿದ್ದೂ ನಿನ್ನವಳನ್ನು ಬದುಕಿಸಿಕೊಳ್ಳಲು ಒಂದು ಮಾರ್ಗವಿದೆ.. ನಿನ್ನ ಜೀವಿತದ ಅರ್ಧ ಆಯುಷ್ಯವನ್ನು ಅವಳಿಗೆ ಧಾರೆ ಎರೆದಲ್ಲಿ ಅವಳು ಬದುಕಿ ಬರುತ್ತಾಳೆ… ” ಎಂದನು.

ರುರುವು ಒಂದಿನಿತೂ ಯೋಚಿಸಿದ ಅಪೂರ್ವವಾದ ವರವೇ ಸಿಕ್ಕಿತೇನೋ ಎಂಬಂತೆ ಮಂದಹಾಸದಿಂದ… ” ಅಯ್ಯಾ, ದೇವದೂತನೇ… ನಾನೀಗಲೇ ನನ್ನ ಅರ್ಧ ಆಯುಷ್ಯವನ್ನ ಪ್ರಮಧ್ವರೆಗೆ ಧಾರೆ ಎರೆದುಕೊಡುತ್ತೇನೆ… ಆಕೆ ಈಗಲೇ ಬದುಕಲಿ ” ಎಂದನು. ಆಗ ಪ್ರಮಧ್ವರೆಯ ನಿಜವಾದ ತಂದೆಯಾದ ವಿಶ್ವಾವಸುವು, ಯಮಧರ್ಮನಲ್ಲಿಗೆ ರುರುವಿನ ಅರ್ಧ ಆಯಸ್ಸನ್ನು ಕೊಂಡು ಹೋಗಿ ಪ್ರಮಧ್ವರೆಯನ್ನ ಬದುಕಿಸುವಂತೆ ಕೇಳಿಕೊಳ್ಳುತ್ತಾನೆ.. ವಿಧಿಯ ಬಯಕೆಯೇ ಹೀಗಿರುವುದನ್ನು ಗಮನಿಸಿದ ಯಮಧರ್ಮನು ರುರುವಿನ ಅರ್ಧ ಆಯಸ್ಸನು ಪ್ರಮಧ್ವರೆಗೆ ಧಾರೆ ಎರೆದು ಆಕೆಯನ್ನು ಜೀವಂತಗೊಳಿಸುತ್ತಾನೆ..
ಮುಂದೆ ರುರು ಮತ್ತು ಪ್ರಮಧ್ವರೆಯ ಮುದುವೆಯಾಗಿ ಅವರು ಬದುಕಿದ್ದಷ್ಟು ಕಾಲ ಸುಖವಾಗಿ ಜೀವಿಸುತ್ತಾರೆ…

ಬಹಶಃ, ಪ್ರಿಯೆ, ನಿನಗಾಗಿ ಪ್ರಾಣವನ್ನೇ ಕೊಡಬಲ್ಲೆ ಅಂತ ಹೇಳುವ ಪ್ರಿಯಕರ, ಪ್ರಿಯತಮೆಯರು ಬೇಕಾದಷ್ಟು ಜನರಿರಬಹುದು‌. ಆದರೆ ನಿಜಾರ್ಥದಲ್ಲಿ ಆಯಸ್ಸನ್ನೇ ಧಾರೆ ಎರೆದು ಕೊಡುವವರು ಎಷ್ಟು ಜನರಿದ್ದಾರು?? ಆಯಸ್ಸನ್ನು ಕೊಡುವುದು ಅಂದರೆ ಪ್ರಾಣವನ್ನೇ ಕೊಟ್ಟ ಹಾಗಲ್ವೇ. ಲೈಲಾ ಮಜ್ನು, ರೋಮಿಯೋ ಜೂಲಿಯಟ್ ಪ್ರೇಮಕಥೆಯನ್ನ ಮಕ್ಕಳಿಗೆ ಹೇಳುವ ನಾವು, ಈ ರುರು ಪ್ರಮಧ್ವರೆಯ ಕತೆಯನ್ನೂ ಮುಂದಿನ ಪೀಳಿಗೆಗೆ ದಾಟಿಸಬೇಕಿದೆ ಅಲ್ವೇ?

  • ದಾಮೋದರ ಶೆಟ್ಟಿ, ಇರುವೈಲು
    ಮೊ.: 9829393098
Visited 251 times, 1 visit(s) today
Close Search Window
Close