Written by 1:55 am Featured, ಪುರಾಣ ಲೋಕದ ಪಾತ್ರಗಳು

ಪರೀಕ್ಷಿತ | ಪುರಾಣ ಲೋಕದ ಪಾತ್ರಗಳು | ಸಂಚಿಕೆ-9

ಅರ್ಜುನ ಹಾಗೂ ಸುಭದ್ರೆಯರ ಮಗ ಅಭಿಮನ್ಯುವಿನಿಂದ ಉತ್ತರೆಯಲ್ಲಿ ಹುಟ್ಟಿದ ಮಗನೇ ಪರೀಕ್ಷಿತ. ಈತನು ಧರ್ಮಾತ್ಮ ಹಾಗೂ ದೈವಭಕ್ತ. ಒಮ್ಮೆ ಬೇಟೆಗಾಗಿ ಹೋಗಿದ್ದ ಪರೀಕ್ಷಿತ, ದಣಿದು ಶಮೀಕ ಋಷಿಯ ಆಶ್ರಮಕ್ಕೆ ಹೋಗಿ ತಪಸ್ಸಿಗೆ ಕುಳಿತಿದ್ದ ಶಮೀಕನಲ್ಲಿ ನೀರು ಕೇಳುತ್ತಾನೆ. ಆದರೆ ಸಮಾಧಿ ಸ್ಥಿತಿಯಲ್ಲಿದ್ದ ಶಮೀಕ ಇದನ್ನು ಕೇಳಿಸಿ ಕೊಳ್ಳುವುದಿಲ್ಲ. ಆಗ ಕೋಪಗೊಂಡ ಪರೀಕ್ಷಿತ, ಶಮೀಕ ತನ್ನನ್ನು ಅವಮಾನ ಮಾಡಿದನೆಂದು ಭಾವಿಸಿ ಅಲ್ಲೇ ಸತ್ತು ಬಿದ್ದಿದ್ದ ಒಂದು ಹಾವನ್ನು ಬಿಲ್ಲಿನಿಂದ ಎತ್ತಿ ಅವನ ಕೊರಳಿಗೆ ಮಾಲೆಯ ರೀತಿ ಹಾಕಿ ಹೊರಟು ಹೋಗುತ್ತಾನೆ‌. ಸ್ವಲ್ಪ ಸಮಯದಲ್ಲೆ ಅಲ್ಲಿಗೆ ಬಂದ ಶಮೀಕನ ಮಗನಾದ ಶೃಂಗಿ ತಂದೆಗಾದ ಅವಮಾನದಿಂದ ಕೋಪಗೊಂಡು ಪರೀಕ್ಷಿತನು ಏಳು ದಿನಗಳೊಳಗಾಗಿ ತಕ್ಷಕನಿಂದ ಕಚ್ಚಲ್ಪಟ್ಟು ಸಾಯುವಂತೆ ಪರೀಕ್ಷಿತನಿಗೆ ಶಾಪ ಕೊಡುತ್ತಾನೆ.
ಅಂತೆಯೇ ಋಷಿಪುತ್ರನಾದ ಶೃಂಗಿಯಿಂದ ಪ್ರೇರಿತನಾದ ತಕ್ಷಕನು, ಈ ಪರೀಕ್ಷಿತನನ್ನು ಕಚ್ಚಿ ಕೊಲ್ಲಬೇಕೆಂಬ ಉದ್ದೇಶದಿಂದ ಹೊರಟು ಬರುತ್ತಿರುವಾಗ, ದಾರಿಯಲ್ಲಿ ಕಾಶ್ಯಪನೆಂಬ ಬ್ರಾಹ್ಮಣನೊಬ್ಬನನ್ನು ಸಂಧಿಸಿದನು. ಈ ಬ್ರಾಹ್ಮಣನು ವಿಷವೈದ್ಯವನ್ನು ಬಲ್ಲವನು ಪರೀಕ್ಷಿತನಿಗೆ ಶಾಪ ಬಂದಿರುವ ವಿಚಾರವನ್ನು ಕೇಳಿ, ಅವನಿಗೆ ಚಿಕಿತ್ಸೆ ಮಾಡಿ ವಿಶೇಷವಾದ ಧನವನ್ನು ಸಂಪಾದಿಸಬೇಕೆಂಬ ಆಶೆಯಿಂದ ಆ ಬ್ರಾಹ್ಮಣನು ಪರೀಕ್ಷಿತನ ಬಳಿಗೆ ಹೋಗುತ್ತಿದ್ದನು ದಾರಿಯಲ್ಲಿ ತಕ್ಷಕನು, ಅವನ ವೃತ್ತಾಂತವನ್ನು ತಿಳಿದುಕೊಂಡು, ಆತನ ಶಕ್ತಿಯನ್ನು ಪರೀಕ್ಷಿಸುವುದಕ್ಕಾಗಿ ಮುಂದಿದ್ದ ಒಂದು ಹಸಿಯ ಮರವನ್ನು ತನ್ನ ವಿಷಾಗ್ನಿಯಿಂದ ಸುಟ್ಟು ಭಸ್ಮ ಮಾಡಿ ಬಿಡುತ್ತಾನೆ. ಒಡನೆಯೇ ಕಾಶ್ಯಪನು, ತನ್ನ ಮಂತ್ರಶಕ್ತಿಯಿಂದ ಆ ಮರ ಮತ್ತೆ ಚಿಗುರುವಂತೆ ಮಾಡುತ್ತಾನೆ. ಈ ಬ್ರಾಹ್ಮಣನಿಂದ ತನ್ನ ಉದ್ದೇಶಕ್ಕೆ ಭಂಗಬರಬಹುದೆಂದು ಭಾವಿಸಿ ತಕ್ಷಕನು ಆ ಬ್ರಾಹ್ಮಣನಿಗೆ ಹೇರಳ ದ್ರವ್ಯವನ್ನಿತ್ತು ಆತನನ್ನು ಹಿಂದೆ ಕಳುಹಿಸಿಬಿಡುತ್ತಾನೆ.

ಇತ್ತ ಪರೀಕ್ಷಿತನು ಶಾಪದ ವಿಚಾರ ತಿಳಿದು ಶೃಂಗಿಯ ಶಾಪದಿಂದ ತನ್ನನ್ನು ರಕ್ಷಿಸಿಕೊಳ್ಳಲು ಅರಮನೆಯಿಂದ ಬಹು ದೂರ ನೀರಿನ ನಡುವೆ ಒಂದು ಕಂಬದ ಮೇಲೆ ಭವನವನ್ನು ಕಟ್ಟಿಕೊಂಡು ಏಳು ದಿನಗಳ ಕಾಲ ಅದರಲ್ಲಿ ಇದ್ದುಕೊಂಡಿದ್ದನು. ಶುಕನೆಂಬ ಮಹರ್ಷಿಯು ಆಗ ರಾಜನಿಗೂ ರಾಣಿಗೂ ಭಾಗವತ ಕಥೆಯನ್ನು ಹೇಳುತ್ತಿದ್ದನು.
ಏಳನೆಯ ದಿನ ಕೆಲ ಬ್ರಾಹ್ಮಣರು ಬಂದು ಪರೀಕ್ಷಿತನಿಗೆ ಕೆಲವು ಹಣ್ಣುಗಳನ್ನು ಕೊಟ್ಟು ಹೋದರು. ಪರೀಕ್ಷಿತನು ತಿನ್ನುವುದಕ್ಕಾಗಿ ಒಂದು ಹಣ್ಣನ್ನು ಎತ್ತಿಕೊಂಡನು. ಕೂಡಲೇ ಅದರೊಳಗಿನಿಂದ ಒಂದು ಹುಳು ಹೊರಬಂದಿತು. ನೋಡುತ್ತಿದ್ದಂತೆಯೇ ಆ ಹುಳು ದೊಡ್ಡದಾಗಿ ಬೆಳೆದು ತನ್ನ ಬಾಯಿಂದ ವಿಷವನ್ನು ಉಗುಳಿ ಹೋಯಿತು. ಕಣ್ಣು ಮುಚ್ಚಿ ತೆರೆಯುವುದರೊಳಗಾಗಿ ಭವನದಲ್ಲಿದ್ದವರೆಲ್ಲಾ ಸತ್ತು ಹೋದರು. ಹೀಗೆ ಶೃಂಗಿಯ ಶಾಪ ಫಲಿಸಿತು.

ಸಂ..: ದಾಮೋದರ ಶೆಟ್ಟಿ, ಇರುವೈಲು
ಮೊ.: 98203 93098

Visited 68 times, 1 visit(s) today
Close Search Window
Close