ಪ್ರಸಂಗ: ಭಸ್ಮಾಸುರ ಮೋಹಿನಿ । ಪಾತ್ರ: ಈಶ್ವರ
ಪದ್ಯ: ಇತ್ತಲೊಂದು ದಿನ ರಜತಾದ್ರಿಯಲ್ಲಿ ಈಶನು ||
ಅರ್ಥ: ಪ್ರಾಣೇಶ್ವರೀ ನಾವಿರುವ ಈ ಕೈಲಾಸ ರಜತಗಿರಿಯೆಂದೇ ಪ್ರಸಿದ್ಧಿ ಪಡೆದಿದೆ. ಹಾಗೆಂದು ಇದು ಬೆಳ್ಳಿಯಿಂದಲೇ ನಿರ್ಮಿತ ಬೆಟ್ಟವೇನಲ್ಲ. ಎತ್ತರವಾದ ಈ ಉತ್ತುಂಗ ಶಿಖರ ಸದಾ ಹಿಮಾಚ್ಚದಿತವಾದುದರಿಂದ ಯಾವ ದಿಕ್ಕಿನಿಂದ ನೋಡಿದರೂ ಇದು ಬಿಳಿಯ ವರ್ಣದಿಂದ ಶೋಭಿಸುವುದರಿಂದ ಬೆಳ್ಳಿಯ ಬೆಟ್ಟವೆನಿಸಿದೆ. ತಾತ್ವಿಕ ದೃಷ್ಠಿಯಲ್ಲಿ ವಿವೇಚಿಸುವುದಿದ್ದರೆ ಸತ್ಯಧರ್ಮಗಳ ಪ್ರತೀಕ. ಎಲ್ಲಿ ಸತ್ಯ ಧರ್ಮಗಳು ನೆಲೆಯಾಗಿವೆಯೋ ಅಲ್ಲಿ ದೇವ ಸಾನಿಧ್ಯವಿರುವುದು.
ಗಿರಿಜೆ, ಈ ಬ್ರಹ್ಮಾಂಡ ಆದಿಶಕ್ತಿಯಿಂದ ನಿರ್ಮಾಣವಾಗಿ ಬ್ರಹ್ಮವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳು, ಸತ್ವ ರಜ,ತಮಗಳೆಂಬ ಮೂರು ಗುಣಗಳು, ಸತ್ಯಲೋಕ, ಮೈಕುಂಠ, ಕೈಲಾಸಗಳೆಂಬ ಮೂರು ಸ್ಥಾನಗಳು, ಸೃಷ್ಟಿ ಸ್ಥಿತಿ, ಲಯಗಳೆಂಬ ಮೂರು ಕಾರ್ಯಗಳು, ಸ್ವಪ್ನ, ಜಾಗೃತ, ಸುಷಪ್ತಗಳೆಂಬ ಮೂರು ಅವಸ್ಥೆಗಳು, ಭೂತ, ಭವಿಷ್ಯ, ವರ್ತಮಾನಗಳೆಂಬ ಮೂರು ಪ್ರಭೇದಗಳು ಹೀಗೆ ವ್ಯಾಪಕವಾಗಿರುವ ಈ ಮೂರೆಲ್ಲಾ ಒಂದಾದಾಗ ಐದು ಶಿರಸ್ಸು, ಈರೈದು ಬಾಹುಗಳು ಹದಿನೈದು ಕಣ್ಣುಗಳಿಂದೊಪ್ಪುವ ಶೂಲ, ಡಮರು ಚಂದ್ರಹಾಸ, ಪಿನಾಕಗಳಿಂದ ಶೋಭಿಸುವ ವಿರಾಟ್ ಸ್ವರೂಪವೇ ಜಗದೀಶನಾಗಿ ಸಮಸ್ತ ಲೋಕಕ್ಕೆ ಮಂಗಳವನ್ನುಂಟು ಮಾಡುವನಾದುದರಿಂದ ನಾನು ಶಂಕರ.
ಗಿರಿಜೆ, ಒಮ್ಮೆ ನನ್ನನ್ನು ಚೆನ್ನಾಗಿ ನೋಡು. ತಲೆಯಲ್ಲಿ ಹೆಣ್ಣು, ಹಣಿಯಲ್ಲಿ ಕಣ್ಣು, ಕೊರಳಲ್ಲಿ ಸರ್ಪ, ನರರುಂಡವೇ ಮಾಲೆಯಾಗಿ ಧರಿಸಿರುವ ನನ್ನನ್ನು ಕಂಡರೆ ನಾಸ್ತಿಕರು ವಿಕಾರವೆಂದರೂ ಭಕ್ತಾದಿಗಳು ಒಂದೊಂದರಲ್ಲಿ ಒಂದೊಂದು ವಿಶೇಷತೆಯನ್ನು ಗುರುತಿಸಿದ್ದಾರೆ. ಸ್ಪರ್ಶ ಮಾತ್ರದಲ್ಲೇ ಸಮಸ್ತ ಪಾಪಗಳನ್ನು ಪರಿಹರಿಸುವ ಗಂಗೆ ಶಿರದಲ್ಲಿ ಒಪ್ಪಿರಲು ಪಾಪಗಳ ಲೇಪವಿಲ್ಲದ ಪಾವನ ಸ್ವರೂಪ ನಾನಾಗಿದ್ದೇನೆ. ದಿಕ್ಕುಗಳೇ ವಸನವಾಗಿರುವುದರಿಂದ ದಿಗಂಬರ, ನಿಧಾನವಾಗಿ ಸಂಚರಿಸುವ ನಂದಿಯೇ ವಾಹನ. ಇದರರ್ಥ ಧರ್ಮವು ನಾಲ್ಕು ಪಾದಗಳಿಂದ ಸ್ಥಿರವಾಗಿ ಮೇಲೆ ದೈವವು ಆರೂಡವಾಗಿದೆ ಎಂದು.
ಯಾವುದಕ್ಕೆ ನಾಶವಿಲ್ಲವೋ ಅದು ಆಕ್ಷರ. ಆಕ್ಷರಗಳು ನಾನು ಧರಿಸಿರುವ ಡಮರುನಾದದಿಂದ ಉದ್ಭವಿಸಿತು. ಧನುರ್ವಿದ್ಯೆಯ ಆಸ್ತ್ರಾಭಿಮಾನಿ ದೇವತೆಗಳು ನನ್ನ ಅಂಶದಿಂದಲೇ ಪ್ರಕಟಗೊಂಡವು ಆದಿ ದೈವಿಕ, ಆದಿ ಆದ್ಯಾತ್ಮಿಕಗಳೆನ್ನುವ ತಾಪತ್ರಯಗಳನ್ನು ಪರಿಹರಿಸುವ ಸಂಕೇತವೇ ನಾನು ಧರಿಸಿರುವ ಮೂರು ಶೂಲಗಳಿಂದ ಕೂಡಿರುವ ತ್ರಿಶೂಲ. ಗಿರಿಜೇ ಇಷ್ಟೆಲ್ಲಾ ವಿಶೇಷತೆ ನನ್ನಲ್ಲಿರುವುದರಿಂದ ನಾನು ಪರಿಪೂರ್ಣನಾದದ್ದು ನಿನ್ನಿಂದವೆನ್ನಲು ನನಗೆ ಅಭಿಮಾನವೆನಿಸುತ್ತದೆ. ನೀನು ಪ್ರಕೃತಿಯಾದರೆ ನಾನು ಪುರುಷ. ದಾಕ್ಷಾಯಿಣಿಯಾಗಿದ್ದ ನೀನು ಪತಿನಿಂದೆಯನ್ನು ಸಹಿಸದೆ ಪ್ರಜ್ವಲಿಸುತ್ತಿರುವ ಯಜೇಶ್ವರನಿಗೆ ದೇಹವನ್ನು ಮರುಜನ್ಮದಲ್ಲಿ ಅರ್ಪಿಸಿ ಸತೀದೇವಿಯೆನಿಸಿ ಮರುಜನ್ಮದಲ್ಲಿ ಪರ್ವತರಾಜನ ಮಡದಿ ಮೇನಕೆಗೆ ಮಗಳಾಗಿ ಜನಿಸಿ ತಪಸ್ಸಿನಿಂದ ನನ್ನನ್ನು ಮೆಚ್ಚಿಸಿ ವರಿಸಿದವಳು. ಹಾಗಾಗಿ ಇಂದು ಭಕ್ತಾದಿಗಳು ನನ್ನನ್ನು ಕೊಂಡಾಡುವಾಗ, ಧ್ಯಾನಿಸುವಾಗ “ಹರಹರಾ ಶಂಭೋ ಶಂಕರ, ಪಾರ್ವತೀ ರಮಣ ನಮೋ ನಮ: ಎನ್ನುತ್ತಾರೆ. ಇಂದು ನಿತ್ಯದಂತೆ, ವೀರಭದ್ರ, ವಿನಾಯಕ, ಶಣ್ಮುಖಾದಿ ಮಕ್ಕಳೊಡನೆ ನಂದಿ, ಭೃಂಗಿ, ಬೃಕುಟವೇ ಮೊದಲಾದ ಪ್ರಥಮರನ್ನು ಕೂಡಿಕೊಂಡು ಭಕ್ತಾದಿಗಳಿಗೆ ದರ್ಶನವನ್ನು ಕೊಟ್ಟಿದ್ದೇನೆ. ಆದರೆ …. ಒಂದು ವಿಷಯ ನೀನು ಮರೆತಹಾಗಿದೆಯಲ್ಲಾ?
ಸಂ.: ಕೋಲ್ಯಾರು ರಾಜು ಶೆಟ್ಟಿ