ಪ್ರಸಂಗ : ಕೃಷ್ಣ ಸಂಧಾನ । ಪಾತ್ರ : ವಿದುರ
ಪದ್ಯ: ನೋಡಿದಂ ವಿದುರ
ಅರ್ಥ: ನಿನ್ನೆಯ ರಾಜ ಸಭೆಯಲ್ಲಿ ಸಂಜಯನು ತಿಳಿಸಿದ ವಾರ್ತೆ ನೀತಿಯಾಗಲಿ ಖಡುಗವಾಗಲಿ ಒಡೆಯ ಲಕ್ಷ್ಮೀಯ ರಮಣನಲ್ಲಿ ಗೈತಹನು; ಇದನ್ನು ಕೇಳಿ ಆನಂದ ಪಟ್ಟವರಲ್ಲಿ ನಾನೂ ಒಬ್ಬ ಕಾರಣ ರಾಜಕೀಯ ಕಾರ್ಯ ನಿಮಿತ್ತ ಹಸ್ತಿನಾವತಿಗೆ ಆಗಮಿಸಿದ ಶ್ರೀ ಹರಿಯ ದರ್ಶನ ಭಾಗ್ಯ ಪಡೆಯ ಬಹುದಲ್ಲಾ ಎಂದು ಅದೇ ಚಿಂತನೆಯಿಂದ ಕಳೆದ ರಾತ್ರಿ ಯುಗವಾಗಿ ಪರಿಣಮಿಸಿದರೂ ಇಂದು ಪ್ರಾತಃಕಾಲ ಸೂರ್ಯೋದಯಕ್ಕೆ ಸರಿಯಾಗಿ ಸಚ್ಚಿದಾನಂದ ಸ್ವರೂಪನಾದ ಶ್ರೀ ಹರಿಯು ಸರ್ವಜ್ಞರಾದ ಮುನಿಗಡಣದೊಡನೆ ಪರಪ್ರವೇಶ ಮಾಡಿದಾಗ ಪೂರ್ಣಕುಂಭ ಸ್ವಾಗತ ನೀಡುತ್ತಾ ನಿಂತಿದ್ದ ರಾಜ ಪರಿವಾರದೊಡನೆ ನಾನೂ ಇದ್ದೆ. ಶ್ರೀ ಹರಿಯು ಸರ್ವರ ಯೋಗ ಕ್ಷೇಮ ವಿಚಾರಿಸುತ್ತಾ ಹಸ್ತಿನಾವತಿಯ ಗಣ್ಯರ ಗೃಹಕ್ಕೆ ಪ್ರತ್ಯೇಕ ಸಂದರ್ಶನವೀಯಲು ತೊಡಗಿದಾಗ ಆ ಗುಂಪಿನಲ್ಲಿ ನಾನೇಕೆ ? ಎಂದು ಸ್ವಗೃಹವನ್ನು ಸೇರಿದೆ ಇದೇನು? ಕುದುರೆಗಳ ಖುರಪುಟದ ದಿವ್ಯ ಧ್ವನಿ ಕೇಳುತ್ತಾ ಇದೆ. ಗರುಡ ಚಿನ್ಹಾಅಂಕಿತ ಧ್ವಜದಿಂದ ಕೂಡಿದ ದಿವ್ಯ ರಥವೊಂದು ಈ ಈ ಕಡಗೆ ಕಡಗೆ ಬರುತ್ತಾ ಇದೆ. ನೋಡುತ್ತಾ ಇದ್ದಂತೆ ಮನೆಯ ಮುಂಭಾಗ ನಿಂತಿತಲ್ಲಾ. ವಿಧದ ಸುಂದರ ಕೆತ್ತನೆಗಳಿಂದ ಕೂಡಿ ಗಂಟೆಗಳಿಂದ ಶೋಭಿಸುತ್ತಾ ಶ್ವೇತ್ವಾಶಗಳಿಂದ ಬಂಧಿಸಲ್ಪಟ್ಟ ದಿವ್ಯರಥ ! ಪ್ರಯಾಣದ ಪ್ರಯಾಸವೋ ಎಂಬಂತೆ ಆರೆಬೆವರಿದ ಸಿರಿ ಮುಖದಲ್ಲಿ ಕಿರುನಗೆ ಲಾಸ್ಯವಾಡುತ್ತಿದೆ. ಪಿತಾಂಬರಧಾರಿ, ನೀಲಮೇಘ ಶ್ಯಾಮ, ನವಿಲು ಗರಿಯಿಂದ ಶೋಭಿಸುವ ಸ್ವರ್ಣ ಕಿರೀಟ, ಹೊಳೆಯುವ ಕುಂಡಲಗಳು ಕೊರಳಲ್ಲಿ, ತುಳಸಿ, ವೈಜಯಂತಿ ಮಾಲೆಗಳೊಡನೆ ಪ್ರಕಾಶಮಾನವಾದ ಕೌಸ್ತುಭಮಣಿ, ಶ್ರೀ ಹರಿಯ ದೇದೀಪ್ಯ ಮಾನವಾದ ದಿವ್ಯ ಸ್ವರೂಪವನ್ನು ಕಣ್ತಣಿಯುವವರೆಗೂ ನೋಡುತ್ತಾ ನಿಂತಿರೋಣ ಎಂದೆನಿಸುತ್ತದೆಯೆನ್ನುವಾಗ ಪರಮಾತ್ಮ ಕೆಳಗಿಳಿದನಲ್ಲಾ ! ಓ ಗೋವಿಂದಾ, ಅಚ್ಯುತ, ಕೇಶವ, ಮಾಧವ, ಮುಕುಂದ ಮುರಾರಿ ನಿನ್ನ ಪಾದಗಳಿಗೆ ನಮೋ ನಮಃ. ಓ ಪರಮಾತ್ಮ ನೀನು ಅಣುರೇಣು ತೃಣ ಕಾಷ್ಟಗಳಲ್ಲಿ ನೆಲೆಯಾಗಿರುವವ, ಲಕ್ಷ್ಮೀ ರಮಣನಾದ ನೀನು ನನ್ನ ಮನೆಗೆ ದಯಮಾಡಿಸಿದ್ದು ಎಂದಾದರೆ ಕಡುಪಾಪಿಯ ಮನೆಗೆ ಭಾಗೀರಥಿ ಹರಿದು ಬಂದಂತೆ, ದಟ್ಟ ದರಿದ್ರನ ಮನೆಗೆ ಭಾಗ್ಯಲಕ್ಷ್ಮಿ ಒಲಿದು ಬಂದಂತೆ. ಓ ದಯಾನಿಧಿ, ನನ್ನ ಮನೆಗೆ ಬಂದ ನಿನ್ನನ್ನು ಹೇಗೆ ಆರ್ಚಿಸಲಿ, ಹೇಗೆ ಸ್ತುತಿಸಲಿ ಎಂಬುದೇ ತಿಳಿಯದಾಗಿದೆ. ಪುಷ್ಪಗಳಿಂದ ಪೂಜಿಸೋಣವೇ? ನಿನ್ನ ನಾಭಿಯಲ್ಲಿ ಕಮಲವು ಉದ್ಭವಿಸಿದ್ದಾಳೆ. ಸ್ವಚ್ಚವಾದ ಜಲದಿಂದ ನಿನ್ನ ಪಾದ ಪೂಜೆ ಮಾಡುವೆ ಎಂದರೆ ಅಘುವಿನಾಸಿನಿ ಗಂಗೆ ನಿನ್ನ ಪಾದದಲ್ಲಿ ಉದ್ಭವಿಸಿದ್ದಾಳೆ. ಆರತಿ ಎತ್ತೋಣವೆಂದರೆ ಕೋಟಿ ಸೂರ್ಯರ ಪ್ರಭೆಗಿಂತ ಮಿಗಿಲಾದ ನಿನ್ನೆದುರಿಗೆ ನನ್ನ ದೀಪ ತೋರಿತೇ ದೇವಾ? ನಿನ್ನನ್ನು ನೋಡಬೇಕೆಂದು ಮನುವೇ ಮೊದಲಾದ ಖುಷಿಗಳು ವಾಯುಭಕ್ಷಕರಾಗಿ ಅದೆಷ್ಟೋ ವರುಷ ತಪಸ್ಸು ಮಾಡಿದರೂ ನೀನು ಅವರಿಗೆ ಅಲಭ್ಯನಂತೆ. ಶೃತಿ, ಸ್ಮೃತಿ, ವೇದಗಳು, ಪುರಾಣಗಳು ನಿನ್ನ ನೆಲೆಯನ್ನು ಅರಿಯಲಾರೆವೆಂದಾಗ ಸಂಸಾರವೆಂಬ ಸಾಗರದಲ್ಲಿ ತಾಪತ್ರಯಗಳೆಂಬ ಅಲೆಗಳಿಂದ ನಿತ್ಯ ಬಳಲುತ್ತಿರುವ ಜೀವಿಗಳಾದ ನಮ್ಮಿಂದ ಸಾಧ್ಯವೇ? ದೇವಾದಿದೇವನೂ ಭಕ್ತರ ಇಷ್ಟ ಫಲಪ್ರದಾಯಕನಾದ ನೀನು ನನಗೆ ಮೈದೋರಿದಾಗ ಬೇಕಾದ ವರವನ್ನು ಬೇಡದೇ ಇದ್ದರೆ ನಿನ್ನ ಔದಾರ್ಯವನ್ನು ನಾನು ಕಡೆಗಣಿಸಿದಂತಾಗುವುದು. ಆದುದರಿಂದ ಏನನ್ನಾದರೂ ಏನನ್ನಾದರೂ ಕೇಳಬೇಕು, ಏನನ್ನು ಕೇಳೋಣ ? ಬಂಧು, ಮಿತ್ರ, ಪುತ್ರ ಕಳತ್ರಾದಿಗಳನ್ನು ಕೇಳೋಣವೇ ? ಅಧಿಕಾರ ಐಶ್ವರ್ಯ ಅಂತಸ್ತನ್ನು ಕೇಳೋಣವೇ ? ಇವೆಲ್ಲಾ ಗಾಳಿಯಂತೆ ಬೀಸಿ ಬೆಂಕಿಯಂತ ಉರಿದು ನೀರಿನಂತೆ ತಣ್ಣಗಾಗಿ ಹೋಗುವಂತಹವುಗಳು. ಆಶಾಶ್ವತವಾದವುಗಳನ್ನು ಬಯಸಿ ಬಾಳಿನ ನೆಮ್ಮದಿಯನ್ನು ಈ ಕಳಕೊಳ್ಳಲು ನಾನು ಇಚ್ಚಿಸುವುದಿಲ್ಲ. ಕೇಶವ ನಿನ್ನ ಭಕ್ತರಲ್ಲಿ ಅರ್ಥಿ, ಅರ್ಥಾರ್ಥಿ, ಜ್ಞಾನಿ, ಜಿಜ್ಞಾಸುಗಳೆಂಬ ನಾಲ್ಕು ವರ್ಗವಂತೆ. ಅವರಿಗೆ ಸಾಲೋಕ್ಯ ಸಾಮಿಪ್ಯ, ಸಾರೂಪ್ಯ, ಸಾಯುಜ್ಯವೆಂಬ ನಾಲ್ಕು ಪದವಿಗಳನ್ನು ನೀನು ಕೊಟ್ಟು ಅನುಗ್ರಹಿಸುತ್ತಿಯಂತೆ. ಆ ನಾಲ್ಕು ವರ್ಗದಲ್ಲಿ ನಾನು ಸಲ್ಲುತ್ತೇನೆಂದು ಹೇಳಲಾರೆ. ಆದರೂ ನಾನು ಕೇಳಲೇಬೇಕು, ಮಲಿನವಾದ ರಾಜಕೀಯದಿಂದಾಗಿ ಮುಂದೆ ಘೋರಯುದ್ದವೆಂಬ ಆಪತ್ತು ಲೋಕವನ್ನು ಆವರಿಸಲು ಸಾಧ್ಯವಿದೆ. ಆದರೆ ದೇವಾ ನೀನು ಇಚ್ಚೆ ಪಟ್ಟರೆ ಮೂಕನೂ ವಾಚಲನಾಗುವನು, ಹೆಳವನು ಪರ್ವತವನ್ನೇರಲು ಸಾಧ್ಯವಿದೆ. ನಿನ್ನ ಅಮೃತ ಸದೃಶವಾದ ವಚನಗಳಿಂದ ರಾಜಕೀಯ ಮಾಲಿನ್ಯವನ್ನು ನಿವಾರಿಸಿ ಲೋಕಕ್ಕೆ ಶಾಂತಿಯನ್ನು ಒದಗಿಸಲು ಸಾಧ್ಯವಿದೆ. ಆದುದರಿಂದ ಆ ದೆಸೆಯಲ್ಲಿ ನೀನು ಮುಂದುವರಿಯಬೇಕು ಎಂದು ನನ್ನ ವಿಜ್ಞಾಪನೆ.
ಸಂ.: ಕೋಲ್ಯಾರು ರಾಜು ಶೆಟ್ಟಿ