ಕಬಂಧ | ಶಾಪ ವಿಮೋಚನೆ -1
ಕಬಂಧ ಎನ್ನುವವ ಒಬ್ಬ ರಾಕ್ಷಸ. ಒಮ್ಮೆ ಶ್ರೀರಾಮನನ್ನೇ ಹಿಡಿದಿತ್ತು ಕಬಂಧ ಬಾಹು. ಶ್ರೀರಾಮ ಸೀತೆಯನ್ನು ಕಳೆದುಕೊಂಡು ಲಕ್ಷ್ಮಣನೊಡನೆ ಆಕೆಯನ್ನು ಹುಡುಕುತ್ತ ದಟ್ಟ ಕಾಡಿನಲ್ಲಿ ಅಲೆಯುತ್ತಿದ್ದಾಗ ಕಬಂಧ ತನ್ನ ಬಾಹುಗಳನ್ನು ಚಾಚಿ ರಾಮ ಮತ್ತು ಲಕ್ಷ್ಮಣರನ್ನು ತಿನ್ನಲು ಮುಂದಾಗುತ್ತಾನೆ. ರಾಮ ಮತ್ತು ಲಕ್ಷ್ಮಣರು ಆತನ ಬಾಹುಗಳನ್ನು ಕತ್ತರಿಸಿ ಆತನನ್ನು ಕೊಲ್ಲುತ್ತಾರೆ.
ಈ ಕಬಂಧ ನಿಜವಾಗಿಯೂ ವಿಶ್ವಾವಸು(ಧನು) ಎಂಬ ಗಂಧರ್ವ. ಶಾಪದಿಂದಾಗಿ ಈತನಿಗೆ ಕಬಂಧ ಎಂಬ ರಾಕ್ಷಸನಾಗಿ ಘೋರ ರೂಪ ತಳೆದು ಹುಟ್ಟಿರುತ್ತಾನೆ. ತನ್ನ ಘೋರ ರೂಪದೊಂದಿಗೆ ಆತ ಅನಾಹುತವನ್ನು ಮಾಡುತ್ತಿದ್ದಾಗ ಇಂದ್ರನು ಆತನ ತಲೆಯ ಮೇಲೆ ವಜ್ರಾಯುಧದಿಂದ ಹೊಡೆಯುತ್ತಾನೆ. ಆಗ ಆತನ ತಲೆ ಮತ್ತು ಕಾಲು ಹೊಟ್ಟೆಯೊಳಗೆ ಸೇರಿಬಿಡುತ್ತದೆ. ಬಳಿಕ ಇಂದ್ರನು ಆತನ ಮೇಲೆ ಕರುಣೆ ತೋರಿ ಆತನ ಆಹಾರ ಗಳಿಕೆಗಾಗಿ, ಬಾಹುಗಳನ್ನು ಎಷ್ಟು ದೂರ ಬೇಕಾದರೂ ವಿಸ್ತರಿಸಬಹುದಾದ ವರವನ್ನು ಆತನಿಗೆ ಕರುಣಿಸುತ್ತಾನೆ.
ಆಮೇಲೆ ಕಬಂಧನು ತನ್ನ ಉದ್ದವಾದ ತೋಳುಗಳಿಂದ ಬೇಕಾದುದನ್ನು ಹಿಡಿದು ಅದನ್ನೇ ಆಹಾರವಾಗಿ ತಿನ್ನುತ್ತ ಬದುಕಿದ್ದನು. ಸೀತೆಯನ್ನು ಕಳಕೊಂಡ ರಾಮಲಕ್ಷ್ಮಣರು ಕಾಡಿನಲ್ಲಿ ಓಡಾಡುತ್ತಿದ್ದಾಗ ತೋಳುಗಳ ಒಳಗೆ ಸಿಕ್ಕಿಕೊಂಡರು. ಅವರು ಕಬಂಧನ ತೋಳುಗಳನ್ನು ಕತ್ತರಿಸಿದರು. ರಾಮನಿಂದಲೇ ಆತನಿಗೆ ಶಾಪ ವಿಮೋಚನೆ ಎಂಬ ಪ್ರತಿಶಾಪ ಇದ್ದಿತ್ತು. ಆತ ಸತ್ತಬಳಿಕ ತನ್ನ ನಿಜರೂಪವನ್ನು ತಳೆದು ರಾವಣ ಸೀತೆಯನ್ನು ಕದ್ದೊಯ್ದುದು, ಸೀತೆಯನ್ನು ಹುಡುಕುವ ಕಾರ್ಯದಲ್ಲಿ ಅವರಿಗೆ ಸುಗ್ರೀವ ನೆರವಾಗುತ್ತಾನೆ ಎಂಬ ವಿಷಯವನ್ನು ತಿಳಿಸುತ್ತಾನೆ. ರಾಮನೇ ಅವನ ದೇಹಕ್ಕೆ ಅಂತ್ಯ ಸಂಸ್ಕಾರ ಮಾಡಬೇಕಾಗಿ ಬಂತು. ಕಬಂಧನು ಮತ್ತೆ ಗಂಧರ್ವನಾಗಿ, ರಾಮ ಲಕ್ಷ್ಮಣರಿಗೆ ನಮಸ್ಕರಿಸಿ ಸ್ವರ್ಗಕ್ಕೆ ಹಿಂದಿರುಗಿದನು.
ಸಂ.: ದಾಮೋದರ ಶೆಟ್ಟಿ, ಇರುವೈಲು