ಕಚ । ಪುರಾಣಲೋಕದ ಪಾತ್ರಗಳು
ರಾಕ್ಷಸರ ಗುರುಗಳಾದಂತ ಶುಕ್ರಾಚಾರ್ಯರು ಶಿವನನ್ನು ಮೆಚ್ಚಿಸಿ ಸತ್ತವರನ್ನು ಬದುಕಿಸುವ “ಮೃತ ಸಂಜೀವಿನಿ” ವಿದ್ಯೆಯನ್ನು ಕಲಿತಿದ್ದರು. ಇದರ ಬಲದಿಂದ ಅವರು ದೇವತೆಗಳೊಡನೆ ಹೋರಾಡಿ ಸತ್ತ ರಕ್ಕಸರನ್ನು ಬದುಕಿಸುತ್ತಿದ್ದರು.
ಕಾಲಾನಂತರದಲ್ಲಿ ದೇವಬಣಕ್ಕೆ ತಮ್ಮಲ್ಲೂ ಯಾರಾದರೊಬ್ಬರು ಮೃತಸಂಜೀವಿನಿ ಕಲಿಯುವುದು ಒಳ್ಳೆಯದು ಅನ್ನಿಸಿತು. ಅದನ್ನವರು ಅಸುರ ಗುರು ಶುಕ್ರಾಚಾರ್ಯರಿಂದಲೇ ಕಲಿಯಬೇಕು. ಅಸುರರು ಇದ್ದಲ್ಲಿಗೇ ಹೋಗಿ ಅದನ್ನು ಕಲಿತು ಬರಲಿಕ್ಕೆ ಗಟ್ಟಿ ಗುಂಡಿಗೆಯ ಬುದ್ಧಿವಂತನೇ ಬೇಕು. ಯಾರನ್ನು ಕಳಿಸೋದು ಎಂದು ಯೋಚಿಸುತ್ತಿದ್ದಾಗ ದೇವಗುರು ಬೃಹಸ್ಪತಿಯ ಮಗ ಕಚ ಮುಂದೆ ಬಂದ. ನಾನು ಆ ವಿದ್ಯೆಯನ್ನು ಖಂಡಿತವಾಗಿಯೂ ಕಲಿತುಬರುತ್ತೇನೆಂದು ಶಪಥ ಮಾಡಿದ.
ಹೀಗೆ ಸುರ ಪಾಳಯದ ಹುಡುಗ ಕಚ ಸಂಜೀವನಿ ಮಂತ್ರ ಕಲಿಯೋಕೆ ಬಂದು, ಶುಕ್ರಾಚಾರ್ಯರನ್ನು ತನ್ನ ವಿನಯದಿಂದ ಮೆಚ್ಚಿಸಿ ಅವರ ಶಿಷ್ಯನಾಗುತ್ತಾನೆ. ಯಾರದರೂ ‘ವಿದ್ಯಾಮ್ ದೇಹಿ’ಯೆಂದು ಬಂದಾಗ ಒಪ್ಪಿಕೊಳ್ಳೋದು ಸೌಜನ್ಯ ಎಂದು ಶುಕ್ರಾಚಾರ್ಯರು ತನ್ನ ಬಳಿ ಶಿಷ್ಯನಾಗಿ ಸೇರಿಸಿಕೊಳ್ಳುತ್ತಾರೆ.
ರಕ್ಕಸರು ಆ ಚೆಂದದ ಮೈಕಟ್ಟಿನ ಸುಂದರ ಯುವಕನ್ನ ಕಂಡು ಹಲ್ಲು ಕಡಿಯುತ್ತಿದ್ದರು. ಅವನು ವಿದ್ಯೆ ಅಪಹರಿಸುತ್ತಾನೆ ಅನ್ನೋದು ಒಂದು ಕಾರಣವಾದರೆ, ತಮ್ಮ ಹೆಣ್ಣುಗಳ ಚಿತ್ತವನ್ನೂ ಅಪಹರಿಸ್ತಾನೆ ಅನ್ನೋದು ಅದಕ್ಕಿಂತ ಮುಖ್ಯ ಕಾರಣ. ಸಾಲದ್ದಕ್ಕೆ ಅವನು ಗುರುಪುತ್ರಿ ದೇವಯಾನಿಯ ಬಳಿ ಸಲುಗೆಯಿಂದ ಮಾತಾಡುತ್ತಾನೆ! ಅವಳ ಕಣ್ಣುಗಳಲ್ಲಿ ಇತ್ತೀಚೆಗೆ ಏನೋ ಥರದ ಹೊಳಪು- ಶುಕ್ರನ ಕಣ್ಣಿಗೂ ಬಿದ್ದಿದೆ.
ಶುಕ್ರರೇನೋ ಸುಮ್ಮನಿದ್ದರು. ದೈತ್ಯ ಯುವಕರು ಸುಮ್ಮನಿರಬೇಕಲ್ಲ? ‘ಆ ಮುದುಕನಿಗೆ ಮೊದಲೇ ಒಂದು ಕಣ್ಣು ಕಡಿಮೆ!’ ಅಂತ ಆಡಿಕೊಳ್ಳುತ್ತ ತಾವೇ ಕಚನಿಗೊಂದು ಗತಿ ಕಾಣಿಸೋಕೆ ತೀರ್ಮಾನಿಸಿದರು. ಹಸು ಮೇಯಿಸಲು ಹೋದ ಕಚನನ್ನ ಕತ್ತರಿಸಿ ನಾಲ್ಕು ದಿಕ್ಕಿಗೆ ಬಿಸಾಡಿದರು.
ಇತ್ತ ಎಂದಿನಂತೆ ಸಂಜೆ ಕಚ ಬರೋದನ್ನೆ ಕಾಯ್ತಿದ್ದ ದೇವಯಾನಿಗೆ ಆತಂಕ. ಅಪ್ಪನನ್ನು ಕರೆದು ವಿಷಯ ತಿಳಿಸಿದಳು. ಶುಕ್ರನಿಗೆ ಮಗಳೆಂದರೆ ವಿಪರೀತ ವ್ಯಾಮೋಹ. ಶುಕ್ರ ತಡ ಮಾಡಲಿಲ್ಲ. ಜ್ಞಾನ ದೃಷ್ಟಿಯಿಂದ ಎಲ್ಲವನ್ನು ತಿಳಿದು ಸಂಜೀವನಿ ಮಂತ್ರ ವನ್ನು ಪಠಿಸಿದ. ಕಚ ನಿದ್ದೆಯಿಂದ ಎನ್ನುವಂತೆ ಎದ್ದು ಬಂದ.
ಮತ್ತೆ ದೈತ್ಯ ಹುಡುಗರು ಕುದ್ದು ಹೋದರು. ಮುಸ್ಸಂಜೆಗೆ ಕಾದರು. ದನ ಕಾಯುತ್ತಿದ್ದ ಕಚನನ್ನು ಹೊತ್ತೊಯ್ದು ಕತ್ತರಿಸಿ ಚೂರುಚೂರು ಮಾಡಿದರು . ಸುಟ್ಟು ಭಸ್ಮ ಮಾಡಿದರು. ಭಸ್ಮವನ್ನ ಮದ್ಯದೊಂದಿಗೆ ಬೆರೆಸಿ ಪಾನ ಪಾತ್ರೆಗೆ ತುಂಬಿದರು. ಶುಕ್ರನ ಮುಂದೆ ಇಟ್ಟರು. ಶುಕ್ರ ಉಲ್ಲಸಿತನಾಗಿ ಕುಡಿದುಮಲಗಿದ. ದೇವಯಾನಿಗೆ ಮತ್ತೆ ಚಿಂತೆ. ಕಚ ಯಾಕೆ ಕಾಣಿಸ್ತಾ ಇಲ್ಲ.
ಈ ಹೊತ್ತಲ್ಲದ ಹೊತ್ತಿನಲ್ಲಿ ಅಪ್ಪನನ್ನ ಎಬ್ಬಿಸುವುದೇ ? ಪ್ರಿಯತಮನಿಗಾಗಿ ಎಲ್ಲರೆದುರು ಕಣ್ಣೀರಿಡುವುದೆ? ತಾನು ಎಲ್ಲರ ಕಣ್ಣಲ್ಲಿ ಸಣ್ಣದಾದರೂ ಚಿಂತಿಲ್ಲ, ಅವನನ್ನ ಬದುಕಿಸಿಯೇ ಸಿದ್ಧ! ಎದ್ದೋಡಿದಳು. ಕೈಮುಗಿದಳು, ‘ತಂದೆ, ಒಂದೇ ಒಂದು ಸಲ… ಕೊನೆಯ ಬಾರಿಗೆ… ನನ್ನ ಪ್ರೇಮದಾಣೆಯಿದೆ ತಂದೆ!’
ಶುಕ್ರ ಕರಗಿದ. ಮಗಳಂದರೆ ವ್ಯಾಮೋಹ . ದೈತ್ಯರು ನಗತೊಡಗಿದರು. ಶುಕ್ರ ತಡೆದು ಕೇಳಿದ, ‘ಯಾಕೆ?!’
‘ಕಚನ ಭಸ್ಮವನ್ನ ನಿಮ್ಮ ಮದ್ಯಕ್ಕೆ ಬೆರೆಸಿದ್ದೆವು. ಅವ ಬದುಕಿ ಬರಬೇಕಂದರೆ ನಿಮ್ಮ ಹೊಟ್ಟೆಯೊಡೆದು ಬರಬೇಕಾಗುತ್ತೆ!! ಗುರು, ಬಿಟ್ಟುಬಿಡಿ, ಅವನು ನಾಳೆಗೆ ಗೊಬ್ಬರವಾಗುತ್ತಾನೆ!!’
ದೇವಯಾನಿ ಕುಸಿದು ಕೂತಳು. ಕಚನ ಕರೆ ಅವಳೊಳಗೆ ಮೊರೆಯುತಿತ್ತು… ಇತ್ತ ತನ್ನ ತಂದೆಯನ್ನೂ ಬಿಟ್ಟುಕೊಡಲಾರಳು. ಶುಕ್ರನೆಂದರೆ ಅವಳ ಮತ್ತೊಂದು ಪ್ರಾಣವೇ. ಹಾಗೆಯೇ ಕಚನೂ.
ದೇವಯಾನಿಯನ್ನ ಸಂತೈಸುತ್ತ ಶುಕ್ರನೆಂದ, ‘ ಮಗಳೇ, ಹೊಟ್ಟೆ ಒಳಗೆ ಇರುವ ಆತನಿಗೆ ಮೃತ ಸಂಜೀವಿನಿ ಉಪದೇಶ ಮಾಡುತ್ತೇನೆ. ಹಾಗೆಯೇ ಸಂಜೀವನಿ ಪಠಿಸಿ ಅವನನ್ನ ಬದುಕಿಸಿಕೊಡ್ತೀನಿ. ಆತ ನನ್ನ ಹೊಟ್ಟೆ ಸೀಳಿ ಹೊರಬರುತ್ತಾನೆ. ನಾನು ಹೊಟ್ಟೆಯೊಡೆದು ಬಿದ್ದ ಮೇಲೆ, ಅದೇ ಸಂಜೀವನಿ ಹೇಳಿ ನನ್ನ ಮರಳಿ ಬದುಕಿಸಲಿ. ಇದು ಅಷ್ಟು ಸುಲಭವಾಗಿರಲಿಲ್ಲ. ಆ ಮಂತ್ರ ಕಲಿಯುವುದು. ಅಷ್ಟು ಸುಲಭವಿದ್ದರೆ ಮೊದಲ ಸಲ ಬದುಕಿಸಿಕೊಳ್ಳುವಾಗ ಕೇಳಿದ್ದ ಕಚ ಕಲಿತುಬಿಟ್ಟಿರುತ್ತಿದ್ದ, ಈ ಹೊತ್ತಿಗೆ ದೇವಲೋಕ ಸೇರಿರುತ್ತಿದ್ದ. ಮೂರು ಬಾರಿ ಕೇಳಿ ಸಾಕಷ್ಟು ಕಲಿತಿದ್ದ ಆತ ಇನ್ನೂ ಒಂದಷ್ಟು ಪಳಗಬೇಕಿತ್ತು. ಕಚನ ದನಿ ಎಲ್ಲಿಂದಲೋ ತೇಲಿಬಂತು, ‘ನಾನು ನಿಮ್ಮನ್ನು ಬದುಕಿಸ್ತೇನೆ ಗುರುಗಳೇ, ನಿಮ್ಮಿಂದಲೇ ಸಾಕಷ್ಟು ಕಲಿತಿದ್ದೇನೆ.’
ಶುಕ್ರರು ಮಂತ್ರ ಮೊಳಗಿಸಿದರು. ಅವರ ಹೊಟ್ಟೆಯನ್ನು ಸೀಳಿ ಕಚ ಹೊರಗೆ ಬಂದ. ಗುರು ಶುಕ್ರಾಚಾರ್ಯರು ಸತ್ತು ಬಿದ್ದರು. ಹಾಗೆ ಬಂದವ ತಾನೂ ಅದೇ ಮಂತ್ರವನ್ನ ಹೇಳಿ ಗುರುವನ್ನ ಬದುಕಿಸಿಕೊಂಡ.
‘ನೀನಿನ್ನು ಇಲ್ಲೇ ಇದ್ದರೆ ಅಪಾಯ. ಹೇಗಿದ್ದರೂ ನಿನ್ನ ಕೆಲಸ ಮುಗಿಯಿತು ಅನ್ನಿಸುತ್ತದೆ. ತಗೋ, ಈ ನನ್ನ ಮಗಳ ಕೈ ನಿನಗೆ ಕೊಡುತ್ತೇನೆ. ಇಬ್ಬರೂ ಹೊರಟುಹೋಗಿ!’ ಶುಕ್ರನೆಂದ.
ಕಚನೇನೋ ಹೊರಡಲು ತುದಿಗಾಲಲ್ಲಿ ನಿಂತಿದ್ದ. ಆದರೆ ದೇವಯಾನಿಯೊಟ್ಟಿಗೆ ಅಲ್ಲ!
‘ಹೇಗಾಗುವುದು ಗುರುಗಳೇ? ನಮ್ಮಲ್ಲಿ ಈ ಪದ್ಧತಿ ಇಲ್ಲ. ಗುರು ತಂದೆಗೆ ಸಮ. ಗುರುಪುತ್ರಿ ಸಹೋದರಿಯಂತಾಗೋದಿಲ್ವೆ? ನಾವು ಅಸುರರಂತಲ್ಲ!’
‘ಕಚ, ನಮ್ಮ ಪ್ರೀತಿಯಾಣೆ….?’ ದೇವಯಾನಿ ಬಿಕ್ಕಿದಳು. ಅವ, ‘ಅದು ಸಹೋದರ ಪ್ರೀತಿ ಕಣೇ, ಅನ್ನುತ್ತ ಸ್ವರ್ಗಕ್ಕೆ ಹೊರಟುಹೋದ.
ಮುಂದೆ ದೇವಯಾನಿ ಯಯಾತಿಯನ್ನು ಮದುವೆಯಾದಳು. ಅದು ಮತ್ತೊಂದು ಸುದೀರ್ಘ ಕಥೆ. ಮುಂದುವರೆಯುವುದು.
ಸಂ.: ದಾಮೋದರ ಶೆಟ್ಟಿ, ಇರುವೈಲು