ಕಶ್ಯಪ ಮುನಿಗಳ ಹದಿಮೂರು ಪತ್ನಿಯರಲ್ಲಿ ಇಬ್ಬರು ಕದ್ರು ಮತ್ತು ವಿನುತೆ. ಇವರಲ್ಲಿ ಕದ್ರುವಿಗೆ ಸರ್ಪಗಳು(ಹಾವುಗಳು) ಮಕ್ಕಳು. ವಿನುತಗೆ ಅರುಣ ಮತ್ತು ಗರುಡ ಎಂಬ ಇಬ್ಬರು ಮಕ್ಕಳು. ಹೀಗಿರಲು ಒಂದು ದಿನ ಅವರೀರ್ವರೂ ದೂರದಲ್ಲಿ ಮೇಯುತ್ತಿರುವ ಸ್ವರ್ಗದ ಬಿಳಿ ಕುದುರೆಯನ್ನು ಕಾಣುತ್ತಾರೆ. ವಿನುತೆ ಆ ಕುದುರೆ ಪೂರ್ತಿ ಬಿಳಿಯಾಗಿದೆ ಎನ್ನುತ್ತಾಳೆ. ಆದರೆ ಕದ್ರು ಅದರ ಬಾಲ ಮಾತ್ರ ಕಪ್ಪಗಾಗಿದೆ ಎನ್ನುತ್ತಾಳೆ. ಹೀಗೇ ಮಾತಿಗೆ ಮಾತು ಬೆಳೆದು ಅವರೀರ್ವರಲ್ಲೂ ಒಂದು ಪಂಥ ಏರ್ಪಡುತ್ತದೆ. ಅದೇನೆಂದರೆ ಯಾರ ಮಾತು ಸುಳ್ಳಾಗುತ್ತದೆಯೋ ಅವರು ಮತ್ತೊಬ್ಬಳ ದಾಸಿಯಾಗಬೇಕು ಎಂದು ನಿರ್ಣಯವಾಗುತ್ತದೆ. ಕದ್ರು ಪಂಥದಲ್ಲಿ ತಾನೇ ಗೆಲ್ಲಬೇಕು ಎಂದು ಹಟದಿಂದ ತನ್ನ ಮಕ್ಕಳಾದ ಹಾವುಗಳನ್ನು ಕರೆದು ಕುದುರೆಯ ಬಾಲವನ್ನು ಸುತ್ತಿಹಿಡಿದು ಬಾಲ ಕಪ್ಪಗೆ ಕಾಣುವಂತೆ ಮಾಡಲು ಸೂಚಿಸುತ್ತಾಳೆ. ನಾಗಗಳು ಹಾಗೆಯೇ ಮಾಡಿ ಕುದುರೆಯ ಬಾಲ ದೂರದಿಂದ ಕಪ್ಪಗೆ ಕಾಣುವಂತೆ ಮಾಡುತ್ತವೆ. ಮಾತಿನಂತೆ ವಿನುತೆ ಕದ್ರುವಿನ ದಾಸಿಯಾಗುತ್ತಾಳೆ.
ಆದರೆ ಕದ್ರು ವಿನುತೆಯನ್ನು ತೀರಾ ಕೆಟ್ಟದಾಗಿ ನಡೆಸಿಕೊಳ್ಳುತ್ತಾಳೆ. ಇದರಿಂದ ವಿನುತೆಯ ಮಗ ಗರುಡನಿಗೆ ಬೇಸರವಾಗುತ್ತದೆ. ಆತ ಸರ್ಪಗಳ ಬಳಿ ಬಂದು ತನ್ನ ತಾಯಿಯನ್ನು ದಾಸ್ಯದಿಂದ ಬಿಡುಗಡೆ ಮಾಡುವ ಬಗ್ಗೆ ಮಾತಾಡುತ್ತಾನೆ.
ಆಗ ಸರ್ಪಗಳು ತಮಗೆ ಸ್ವರ್ಗದಿಂದ ಅಮೃತ ತಂದು ಕೊಟ್ಟರೆ ಬಿಡುಗಡೆ ಮಾಡುವುದಾಗಿ ತಿಳಿಸುತ್ತವೆ. ಅಂತೆಯೇ ಗರುಡ ಸ್ವರ್ಗಕ್ಕೆ ಹೋಗಿ ಇಂದ್ರನ ಭೇಟಿ ಮಾಡುತ್ತಾನೆ. ಆದರೆ ಇಂದ್ರ ಅಮೃತ ನೀಡಲು ಹಿಂಜರಿಯುತ್ತಾನೆ. ಆಗ ಗರುಡ ತನ್ನ ತಾಯಿಯ ಬಂಧ ಮುಕ್ತಿಯಾದ ಕೂಡಲೇ ಅಮೃತ ಹಿಂದೆ ತರುವುದಾಗಿ ತಿಳಿಸುತ್ತಾನೆ, ಅಂತೆಯೇ ಇಂದ್ರ ಒಪ್ಪಿ ಅಮೃತ ನೀಡುತ್ತಾನೆ.
ಅಮೃತವನ್ನು ಕಂಡ ಸರ್ಪಗಳು ಸಂತೋಷಗೊಂಡು ವಿನುತೆಯನ್ನು ಬಂಧ ಮುಕ್ತಿಗೊಳಿಸುತ್ತವೆ. ಆದರೆ ಗರುಡ ಅಮೃತವನ್ನು ಅಲ್ಲಿಂದ ತಕ್ಷಣವೇ ಹಿಂದೆ ಕೊಂಡೊಯುತ್ತಾನೆ. ಸರ್ಪಗಳು ನಿರಾಸೆಯಿಂದ ಆ ಅಮೃತ ಇಟ್ಟಿದ್ದ ಧರ್ಬೆಯನ್ನೇ ನೆಕ್ಕುತ್ತವೆ. ಹಾಗೆ ನೆಕ್ಕಿ ನೆಕ್ಕಿ ಅವುಗಳ ನಾಲಿಗೆ ಎರಡಾಗಿ ಸೀಳಿ ಹೋಗುತ್ತದೆ.
ಅಂದಿನಿಂದ ಗರುಡ ಜಾತಿಗೂ ಸರ್ಪಗಳಿಗೂ ವೈರತ್ವ ಉಂಟಾಗುತ್ತದೆ.
ಸಂ.:.: ದಾಮೋದರ ಶೆಟ್ಟಿ, ಇರುವೈಲು
ಮೋ; 9820393098