Written by 3:36 am ಪುರಾಣ ಲೋಕದ ಪಾತ್ರಗಳು

ಮುಚುಕುಂದ | ಪುರಾಣ ಲೋಕದ ಪಾತ್ರಗಳು | ಸಂಚಿಕೆ-10

ಮುಚುಕುಂದ ರಾಜಾ ಮಾಂಧಾತನ ಮಗ ಮತ್ತು ಭಕ್ತ ಅಂಬರೀಷನ ತಮ್ಮ. ಇಕ್ಶ್ವಾಕು ವಂಶದ ಪ್ರಮುಖ ರಾಜ. ಮಹಾಭಾರತದಲ್ಲಿ ಮತ್ತು ಭಾಗವತ ಪುರಾಣದಲ್ಲಿ ಉಲ್ಲೇಖವಿರುವ ಪುರಾಣಪುರುಷ. ಆತ ಧರ್ಮ ಪರಿಪಾಲಕನಾಗಿದ್ದು ದೇವತೆಗಳಿಗೂ ಮಿತ್ರನಾಗಿದ್ದ. ಹೀಗಿರಲು ಒಂದು ದಿನ ರಾಕ್ಷಸರು ದೇವತೆಗಳ ಮೇಲೆ ಧಾಳಿ ಮಾಡಿದರು. ಆಗ ದೇವತೆಗಳು ಮುಚುಕುಂದನ ಸಹಾಯ ಯಾಚಿಸಿದರು. ಮುಚುಕುಂದ ಅವರಿಗೆ ಸಹಾಯ ಮಾಡಲು ಒಪ್ಪಿ ದೇವತೆಗಳ ಸೇನಾನಿಯಾಗಿ ಯುದ್ಧಕ್ಕೆ ತೆರಳಿದ.‌ ಆ ಯುದ್ಧ ಸಹಸ್ರಾರು ವರುಷಗಳ ತನಕ ನಡೆಯಿತು. ಕೊನೆಗೆ ದೇವತೆಗಳಿಗೆ ಜಯವಾಯಿತು. ಯುದ್ಧದಲ್ಲಿ ಮುಚುಕುಂದ ತೀವ್ರವಾಗಿ ದಣಿದಿದ್ದ. ತಮಗೆ ಜಯವನ್ನು ಸಂಪಾದಿಸಿಕೊಟ್ಟ ಮುಚುಕುಂದನಿಗೆ ದೇವತೆಗಳು ವರವನ್ನು ನೀಡಲು ಮುಂದಾದರು. ಮುಚುಕುಂದ ತೀರಾ ದಣಿದ ಕಾರಣ ತನಗೆ ತಕ್ಷಣ ವಿಶ್ರಾಂತಿ ಬೇಕು ಎನ್ನುತ್ತಾನೆ. ಯಾರಾದರೂ ನಿನ್ನ ನಿದ್ದೆಗೆ ಭಂಗ ತಂದರೆ ಅವರು ಅಲ್ಲೇ ಸುಟ್ಟು ಬೂದಿಯಾಗಲಿ ಎಂದು ದೇವತೆಗಳು ಹರಸಿ ಕಳಿಸುತ್ತಾರೆ.
ಅಂತೆಯೇ ಆತ ಭೂಲೋಕಕ್ಕೆ ಬಂದು, ಒಂದು ಗುಹೆಯಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿರುತ್ತಾನೆ. (ಐತಿಹ್ಯದ ಪ್ರಕಾರ ಇಂದಿನ ಗಿರ್ನಾರ್ ಬೆಟ್ಟ) . ಮುಚುಕುಂದನು ತ್ರೇತಾಯುಗಕ್ಕಿಂತಲೂ ಮುಂಚಿನ ಕಾಲದವನು. , ತ್ರೇತಾಯುಗವನ್ನು ಮುಚುಕುಂದನು ನಿದ್ರೆಯಲ್ಲಿಯೇ ಕಳೆಯುತ್ತಾನೆ. ಅಷ್ಟರಲ್ಲಿ ದ್ವಾಪರ ಯುಗ ಪ್ರಾರಂಭವಾಗಿತ್ತು.
ಅದೇ ಕಾಲದಲ್ಲಿ ಕಾಲಯವನ ಎಂಬೊಬ್ಬ ಕೃಷ್ಣ ದ್ವೇಷಿ ರಾಕ್ಷಸ ಮದಾಂದನಾಗಿ ಮೆರೆಯುತ್ತಿದ್ದ. ಈತ ಯವಸೇನ ಎಂಬ ರಾಜನ ಮಗ. ಕಾಲಯವನ ತನಗೆ ಯುದ್ಧದಲ್ಲಿ ಯಾರಿಂದಲೂ ಸೋಲಾಗಕೂಡದು ಎಂಬ ವರ ಪಡೆದು ಜನರಿಗೆ ತೊಂದರೆ ಮಾಡುತ್ತಾ ಇರುತ್ತಾನೆ. ಒಮ್ಮೆ ಕಾಲಯವನನಿಗೂ ಕೃಷ್ಣನಿಗೂ ಭಯಂಕರ ಯುದ್ಧವಾಗುತ್ತದೆ.
ಯುದ್ಧದಲ್ಲಿ ಸೋಲು ಗೆಲುವಿನ ತೀರ್ಮಾನ ಆಗುವುದಿಲ್ಲ. ಆಗ ಕೃಷ್ಣನಿಗೆ ಮುಚುಕುಂದನ ನೆನಪಾಗುತ್ತದೆ. ಕೂಡಲೇ ಆತ ಕಾಲಯವನನಿಂದ ತಪ್ಪಿಸಿಕೊಂಡಂತೆ ನಟಿಸಿ ಮುಚುಕುಂದ ಇರುವ ಗುಹೆಗೆ ಹೋಗಿ ಅಲ್ಲಿ ಅಡಗುತ್ತಾನೆ.ಕಾಲಯವನನೂ ಕೃಷ್ಣನ ಹಿಂದೆ ಓಡಿ ಬರುತ್ತಾನೆ ಮತ್ತು ಅಲ್ಲಿ ಹೊದ್ದು ಮಲಗಿದ್ದ ಮುಚುಕುಂದನನ್ನೇ ಕೃಷ್ಣ ಎಂದು ಭಾವಿಸಿ ಅವನಿಗೆ ಒದೆಯುತ್ತಾನೆ. ಇದರಿಂದ ಎಚ್ಚರಗೊಂಡ ಮುಚುಕುಂದ ಕಣ್ಣು ಬಿಟ್ಟಾಗ ಅಲ್ಲೇ ನಿಂತಿದ್ದ ಕಾಲಯವನ ಕಣ್ಣಿಗೆ ಬೀಳುತ್ತಾನೆ. ಮುಚುಕುಂದನಿಗಿದ್ದ ವರದಿಂದ ತಕ್ಷಣ ಸತ್ತು ಬೀಳುತ್ತಾನೆ. ಕೃಷ್ಣ ಅಡಗಿದ್ದ ಜಾಗದಿಂದ ಹೊರಬಂದು ತನ್ನ ಭಕ್ತನಾದ ಮುಚುಕುಂದನಿಗೆ ಮೋಕ್ಷವನ್ನು ಕರುಣಿಸುತ್ತಾನೆ. ಹೀಗೆ ಉಪಾಯದಿಂದ ಕೃಷ್ಣ, ಕಾಲಯವನನ್ನೂ ಕೊಲ್ಲಿಸುತ್ತಾನೆ ಹಾಗೂ ಮುಚುಕುಂದನಿಗೆ ಮೋಕ್ಷವನ್ನು ಕರುಣಿಸುತ್ತಾನೆ.

ಲೇ- ದಾಮೋದರ ಶೆಟ್ಟಿ, ಇರುವೈಲು
ಮೊ.: 98203 93098

Visited 232 times, 1 visit(s) today
Close Search Window
Close