ತಾಟಕಿ । ಶಾಪ ವಿಮೋಚನೆ-3
ತಾಟಕಿ -ವಾಲ್ಮೀಕಿ ರಾಮಾಯಣದ ಬಾಲಕಾಂಡದಲ್ಲಿ ಬರುವ ಒಬ್ಬ ರಾಕ್ಷಸಿ. ಯಕ್ಷರಾಜ ಸುಕೇತುವೆಂಬವನ ತಪಸ್ಸಿಗೆ ಒಲಿದ ಬ್ರಹ್ಮದೇವರು ಆತನಿಗೆ ಹೆಣ್ಣು ಮಗು ಒಂದನ್ನು ಅನುಗ್ರಹಿಸಿದರು. ಬ್ರಹ್ಮನ ವರದಿಂದ ಹುಟ್ಟಿದ ಈಕೆ ಹತ್ತು ಸಾವಿರ ಆನೆಯ ಬಲವನ್ನೂ ಪಡೆದಿದ್ದಳು. ಜರ್ಝನೆಂಬ ಯಕ್ಷನ ಮಗನಾದ ಸುಂದ ಈಕೆಯ ಪತಿ. ಬಲಾಢ್ಯರಾದ ಮಾರೀಚ ಸುಬಾಹುಗಳು ಮಕ್ಕಳು. ಒಮ್ಮೆ ಅಗಸ್ತ್ಯ ಮುನಿಯ ಯಾವುದೋ ಶಾಪದಿಂದ ಸುಂದನು ಮರಣವನಪ್ಪಿದ್ದನು. ಇದರಿಂದ ಕೋಪಗೊಂಡ ತಾಟಕಿಯು ಮಗ ಮಾರೀಚ ಸುಬಾಹುಗಳನ್ನು ಕೂಡಿಕೊಂಡು ಅಗಸ್ತ್ಯ ಮುನಿಯನ್ನೇ ಕೊಲ್ಲಲನುವಾದಳು. ಆಗ ಅಗಸ್ತ್ಯ ಮುನಿಗಳು ಸುಂದರಳಾದ ತಾಟಕಿಗೆ ವಿಕಾರಮುಖವುಳ್ಳ ನರಭಕ್ಷಕಿ ರಾಕ್ಷಸಿಯಾಗು ಹಾಗೂ ನಿನ್ನ ಮಕ್ಕಳಿಬ್ಬರೂ ರಾಕ್ಷಸರಾಗಲಿ, ಎಂದು ಶಾಪವಿತ್ತರು. ಇದರಿಂದ ಕ್ರೋಧಗೊಂಡ ತಾಟಕಿಯು ಅಗಸ್ತ್ಯರು ವಾಸಿಸುತ್ತಿದ್ದ ಮಲದ ಹಾಗೂ ಕರೂಷವೆಂಬ ಸುಂದರ ಪ್ರದೇಶವನ್ನು ನಾಶಮಾಡಲು ತೊಡಗಿದಳು. ಅಂದಿನಿಂದ ಈಕೆ ತಾನು ವಾಸ ಮಾಡುತ್ತಿದ್ದ ಪ್ರದೇಶಗಳಲ್ಲಿ ಗೋ ಬ್ರಾಹ್ಮಣರನ್ನು ಪೀಡಿಸತೊಡಗಿದಳು. ಹತ್ತಿರದ ಆಶ್ರಮದಲ್ಲೇ ಇದ್ದ ವಿಶ್ವಾಮಿತ್ರ ಮಹರ್ಷಿಗಳು ಯಾಗ ಮಾಡತೊಡಗಿದಾಗಲೆಲ್ಲ ಈ ತಾಯಿ ಮಕ್ಕಳು ಯಜ್ಞಕ್ಕೆ ಅಮೇಧ್ಯವನ್ನು ತಂದು ಸುರಿದು ವಿಘ್ನವನ್ನುಂಟು ಮಾಡುತ್ತಿದ್ದರು.
ವಿಶ್ವಾಮಿತ್ರರು ಅಯೋಧ್ಯೆಯ ಅರಸ ದಶರಥನ ಮಕ್ಕಳಾದ ರಾಮಲಕ್ಷ್ಮಣರನ್ನು ಸಿದ್ಧಾಶ್ರಮಕ್ಕೆ ಕರೆತರುತ್ತಾರೆ. ಬರುವಾಗ ದಾರಿಯಲ್ಲಿ ನಿರ್ಜನವಾಗಿದ್ದ ಮಲದ ಕರೂಷ ದೇಶಗಳನ್ನು ಕಂಡು ಕುತೂಹಲಭರಿತವಾಗಿ ರಾಮ ಲಕ್ಷ್ಮಣರು ಇದು ಯಾಕೆ ಹೀಗಿದೆ ಎಂದು ಕೇಳಲು, ಋಷಿ ಅಲ್ಲಿನ ವೃತ್ತಾಂತವನ್ನೆಲ್ಲ ತಿಳಿಸಿ ತಾಟಕಿಯನ್ನು ಕೊಲ್ಲಲು ಹೇಳುತ್ತಾರೆ. ಆಗ ಶ್ರೀರಾಮನು ಜೋರಾಗಿ ಧನುಷ್ಟಂಕಾರ ಮಾಡಿದನು. ಆ ಶಬ್ದ ಎಲ್ಲ ದಿಕ್ಕುಗಳಲ್ಲಿಯೂ ಪ್ರತಿಧ್ವನಿಸಿದವು. ಆ ಶಬ್ದದಿಂದ ವನದಲ್ಲಿ ಇರುವ ಸಮಸ್ತ ಪ್ರಾಣಿಗಳೂ ನಡುಗಿಹೋದವು. ತಾಟಕಿಯು ಶಬ್ದ ಕೇಳಿ ಆ ದಿಕ್ಕಿಗೆ ಧಾವಿಸಿ ಬಂದಳು. ಆಕೆಯ ಶರೀರ ಬಹಳ ಎತ್ತರವಾಗಿತ್ತು , ಮುಖ ವಿಕೃತವಾಗಿ ಕಂಡುಬರುತ್ತಿತ್ತು.
ಕ್ರೋಧೋನ್ಮತ್ತ ತಾಟಕೆಯು ಅಲ್ಲಿಗೆ ಬಂದು ಆ ಇಬ್ಬರು ಸಹೋದರರ ಮೇಲೆ ಕಲ್ಲಿನ ಮಳೆಗರೆದಳು. ಇದನ್ನು ನೋಡಿ ರಾಘವನು ಬಾಣಗಳಿಂದ ಕಲ್ಲಿನ ಮಳೆಯನ್ನೂ ನಿವಾರಿಸಿ , ತನ್ನತ್ತ ಧಾವಿಸಿಬರುವ ನಿಶಾಚರಿಯ ಎರಡು ಕೈಗಳನ್ನು ಹರಿತವಾದ ಬಾಣಗಳಿಂದ ಕತ್ತರಿಸಿ ಹಾಕಿದನು. ಎರಡು ಭುಜಗಳು ತುಂಡಾದುದರಿಂದ ಬಳಲಿದ ತಾಟಕೆಯು ಅವರ ಬಳಿ ನಿಂತು ಜೋರಾಗಿ ಗರ್ಜಿಸಿದಳು. ವೇಗವಾಗಿ ಬರುತ್ತಿದ್ದ ಆಕೆಯನ್ನು ನೋಡಿ ಶ್ರೀರಾಮನು ಒಂದು ಬಾಣದಿಂದ ಆಕೆಯ ಎದೆಯನ್ನು ಸೀಳಿಬಿಟ್ಟನು. ಹೀಗೆ ತಾಟಕೆಯು ಸತ್ತು ಭೂಮಿಗೆ ಬಿದ್ದಳು. ಹೀಗೆ ತಾಟಕಿಯ ಶಾಪ ವಿಮೋಚನೆ ಆಗುತ್ತದೆ. ಅಂದಿನಿಂದ ಆ ಪ್ರದೇಶವೂ ಶಾಪಮುಕ್ತವಾಗಿ, ರಮಣೀಯವಾಗಿ, ಕಂಗೊಳಿಸ ಹತ್ತಿತು. ತಾಟಕಿಯನ್ನು ವಧಿಸಿ ಶ್ರೀರಾಮಚಂದ್ರನು ದೇವತೆಗಳ ಹಾಗೂ ವಿಶ್ವಾಮಿತ್ರರ ಪ್ರಶಂಸೆಗೆ ಪಾತ್ರನಾದನು.
ಸಂ.: ದಾಮೋದರ ಶೆಟ್ಟಿ, ಇರುವೈಲು