ತುಂಬುರು | ಶಾಪ ವಿಮೋಚನೆ 2:
ಕಶ್ಯಪ ಮುನಿಯಿಂದ ಅರಿಷ್ಟೆ ಎಂಬ ಪತ್ನಿಯಲ್ಲಿ ಜನಿಸಿದ ಗಂಧರ್ವನೇ ತುಂಬುರು. ನಾರದ ಹಾಗೂ ತುಂಬುರು ಇವರಿಬ್ಬರೂ ದೇವಲೋಕದ ಗಾಯಕರು. ಒಮ್ಮೆ ರಂಬೆ ಸ್ವರ್ಗದಿಂದ ಕುಬೇರನ ಬಳಿಗೆ ಹೋಗುತ್ತಿರಲು, ಮಾರ್ಗ ಮಧ್ಯದಲ್ಲಿ ಅವಳನ್ನು ತಡೆದ ತುಂಬುರುವು ಆಕೆಯನ್ನು ಬಲತ್ಕಾರಿಸಿ ಅವಳ ಮಾನಭಂಗ ಮಾಡಿದ. ತನ್ನಲ್ಲಿಗೆ ಬಂದ ರಂಭೆಯನ್ನು ದಿಟ್ಟಿಸಿ ನೋಡಿದ ಕುಬೇರನು ಸಂಶಯಗ್ರಸ್ತನಾಗಿ ಆಕೆಯನ್ನು ಪ್ರಶ್ನಿಸಿದಾಗ ರಂಭೆ ನಡೆದ ಘಟನೆಯನ್ನು ವಿವರಿಸಿದಳು. ಕೋಪಗೊಂಡ ಕುಬೇರನು ತುಂಬುರುವನ್ನು ಕರೆಸಿ “ನೀನು ನನ್ನ ಬಳಿಗೆ ಬರುತ್ತಿದ್ದ ರಂಭೆಯನ್ನು ಮಾರ್ಗಮಧ್ಯದಲ್ಲಿ ಅಡ್ಡಗಟ್ಟಿ ಧರ್ಮವಿರುದ್ಧವಾಗಿ ಲಜ್ಜೆ- ವಿವೇಕವಿಲ್ಲದೆ ಅವಳ ಮಾನಭಂಗ ಮಾಡಿರುವೆಯಾದುದರಿಂದ ರಾಕ್ಷಸ ಯೋನಿಯಲ್ಲಿ ಜನಿಸು” ಎಂದು ಶಾಪವಿತ್ತನು.
ಬಳಿಕ ತುಂಬುರುವು ಕಂಗೆಟ್ಟು ದಯೆತೋರುವಂತೆ ಬೇಡಿದಾಗ ಮರುಕಗೊಂಡ ಕುಬೇರನು “ಮುಂದೆ ರಾಮ ಲಕ್ಷ್ಮಣರು ಸೀತೆಯೊಂದಿಗೆ ವನವಾಸಕ್ಕೆಂದು ಅರಣ್ಯಕ್ಕೆ ಬಂದಾಗ ಅವರನ್ನು ಅಡ್ಡಗಟ್ಟಿ ಸೀತಾಪಹರಣಕ್ಕೆ ಯತ್ನಿಸಿ, ಶ್ರೀರಾಮನಿಂದ ಹತನಾದಾಗ ನಿನಗೆ ಶಾಪ ವಿಮೋಚನೆಯಾಗಲಿ ” ಎಂದನು. ಅಂತೆಯೇ ತುಂಬುರುವು ದಂಡಕಾರಣ್ಯದಲ್ಲಿ “ವಿರಾಧ”ನೆಂಬ ರಾಕ್ಷಸನಾಗಿ ಜನಿಸಿ, ಅಲ್ಲಿಗೆ ಬಂದ ಸೀತಾ ರಾಮ ಲಕ್ಷ್ಮಣರನ್ನು ತಡೆದು ಸೀತೆಯನ್ನೆತ್ತಿಕೊಂಡು ಓಡಿಹೋಗುತ್ತಾನೆ.ಆಗ ರಾಮ ಮತ್ತು ಲಕ್ಷ್ಮಣರು ಅವನ ತೋಳುಗಳನ್ನು ಕತ್ತರಿಸಿ ಎಲ್ಲ ರೀತಿಯಲ್ಲೂ ಗಾಯಗೊಳಿಸಿದರು. ಆದರೂ ಆತ ಸಾಯುತ್ತಿರಲಿಲ್ಲ. ಆಗ ವಿರಾಧನು, ಅಯ್ಯಾ ನೀನು ಯಾರೆಂದು ನಾನು ಬಲ್ಲೆ. ನಾನು ತುಂಬುರು ಎಂಬ ಗಂಧರ್ವನಿದ್ದೇನೆ. ಶಾಪದಿಂದ ಈ ರೂಪದಲ್ಲಿದ್ದೇನೆ. ನಾನು ಹಾಗೆ ಸಾಯಲಾರೆ, ಆಳವಾದ ಹಳ್ಳದಲ್ಲಿ ನನ್ನನ್ನು ಹೂತು ಬಿಡಿ. ಆಗ ಮಾತ್ರ ನನಗೆ ಮೋಕ್ಷ -ಎನ್ನುತ್ತಾನೆ. ಅಂತೆಯೇ ಅವನ ದೇಹವನ್ನು ಹೂತು ಹಾಕಿದಾಗ ಶಾಪ ವಿಮೋಚನೆ ಹೊಂದಿದ, ತುಂಬುರು ತನ್ನ ನಿಜರೂಪ ಪಡೆದು,ಅವರಿಗೆ ನಮಸ್ಕರಿಸಿ ತನ್ನ ಲೋಕವನ್ನು ಸೇರಿದನು. ಹೀಗೆ ವಿರಾಧನ ಶಾಪ ವಿಮೋಚನೆ ಆಯಿತು.
ಸಂ.: ದಾಮೋದರ ಶೆಟ್ಟಿ, ಇರುವೈಲು