Written by 4:58 pm Articles, Featured, Trending

ಯಕ್ಷಲೋಕದ ದಿಗ್ಗಜ ಹುಡಗೋಡು ಚಂದ್ರಹಾಸ | ಸಿಂಚನಾ ಜೈನ್ ಮುಟ್ಟದಬಸದಿ

ಯಕ್ಷಗಾನ ರಂಗದ ಉಭಯ ತಿಟ್ಟುಗಳಲ್ಲಿ ಒಬ್ಬ ಕಲಾವಿದನು ರಂಗದಲ್ಲಿ ಯಶಸ್ವಿಯಾಗಿ ಅಭಿಮಾನಿಗಳನ್ನು ಗಳಿಸಲು ಧೀರ್ಘ ಕಾಲೀನ ರಂಗ ಕೈಂಕರ್ಯದ ಜೊತೆಗೆ ಪಾತ್ರ ಪರಕಾಯ ಪ್ರವೇಶ ಮಾಡುವ ಛಾತಿ ಬೇಕು ಹಾಗಾಗಲು ಆತನಲ್ಲಿ ಕಲಾಭಿವ್ಯಕ್ತಿಗೆ ಅನುಕೂಲಿಸುವ ಗುಣಾತ್ಮಕ ಅಂಶಗಳೂ ಅತೀ ಅಗತ್ಯ. ಹಾಗೆ ನೋಡಿದಾಗ ಓರ್ವ ಕಲಾವಿದನಿಗೆ ಉತ್ತಮ ಶರೀರ, ಶಾರೀರ, ಆಕರ್ಷಕವಾದ ಮುಖ, ಶ್ರುತಿ ಬದ್ದ ಮಾತು, ಲಯಬದ್ಧ ನರ್ತನ, ಪಾತ್ರ ರಚನೆಯ ಕವಿಭಾವನ್ನು ಗ್ರಹಿಸಲು ಬೇಕಾದ ಮನೋಧರ್ಮ, ಅಲೌಕಿಕ ಜಗತ್ತನ್ನು ಲೌಕಿಕ ಜಗತ್ತಿನೊಂದಿಗೆ ಸಮೀಕರಿಸಿ ಪಾತ್ರ ನಿರ್ವಹಿಸುವ ಚಿಕಿತ್ಸಕ ಬುದ್ದಿ ಹಾಗೂ ಇದಿರಾಳಿ ಪಾತ್ರಗಳ ಜೊತೆಗೆ ಪ್ರತ್ಯತ್ಪನ್ನ ಮತಿಯ ಸಂಭಾಷಣೆಯನ್ನು ಕಟ್ಟಿಕೊಳ್ಳುವ ಯೋಗ್ಯತೆ ಬೇಕು. ಇಷ್ಟೆಲ್ಲ ಇದ್ದ ಕಲಾವಿದ ರಂಗದಲ್ಲಿ ಯಶಸ್ಸನ್ನು ಕಂಡು ಮೇಲೆ ಬೀಳುತ್ತಾನೆ ಎಂದು ಖಂಡಿತಾ ಹೇಳಬಹುದು. ಒಂದು ವೇಳೆ ಹಾಗೆ ಮೇಲೆ ಬೀಳದಿದ್ದರೆ ಅದು ಆತನ ದೌರ್ಭಾಗ್ಯವೇ ಸರಿ.

ಈ ಎಲ್ಲ ಗುಣಗಳು ಇದ್ದ ಹುಡಗೋಡುರವರು ಕಠಿಣ ಪರಿಶ್ರಮದಿಂದ ವೃತ್ತಿಯಲ್ಲಿ ಯಶಸ್ಸನ್ನು ಕಂಡವರು. ಇದರ ಜೊತೆಗೆ ಅವರಲ್ಲಿ ಓರ್ವ ಕಲಾವಿದನಿಗೆ ಅಗತ್ಯವಾಗಿ ಇರಬೇಕಾದ ನಯ ವಿನಯ ಸ್ನೇಹಪರ ಅಧ್ಯಯನಶೀಲ ಮನಸ್ಸು ಇತ್ತು. ಹಾಗಾಗಿ ಹುಡಗೋಡುರವರು ರಾತ್ರಿ ರಂಗದಲ್ಲಿಯೂ ಹಗಲು ಬಿಡಾರದಲ್ಲಿಯೂ ಎಲ್ಲರಿಗೂ ಬೇಕಾದ ಕಲಾವಿದರಾಗಿದ್ದರು.

ಯಕ್ಷಗಾನ ರಂಗದಲ್ಲಿ ಹೊಸಬರು ಧಿಡೀರ್ ಆಗಿ ರಂಗವನ್ನು ಆವರಿಸಿ ಮೆರೆವ ಫಾಸ್ಟ್ ಫುಡ್ ಸಂಸ್ಕೃತಿ ಖಂಡಿತಾ ಇರಲಿಲ್ಲ. ಅಲ್ಲಿ ಹಂತ ಹಂತವಾಗಿ ಒಂದೊಂದೇ ವಿಭಾಗವನ್ನು ಕ್ರಮಿಸಿ ಕಲಾವಿದ ರೂಪುಗೊಳ್ಳುತ್ತ ಇದ್ದ ಕಾಲವದು. ಅದೇ ರೀತಿ ಹುಡಗೋಡುರವರು ಕೂಡ ಪ್ರಪ್ರಥಮವಾಗಿ ಸಾಗರದ ಶುಂಠಿ ಸತ್ಯನಾರಾಯಣ ಭಟ್ಟರ ಯಜಮಾನಿಕೆಯ ಬಚ್ಚಗಾರು ಬಯಲಾಟ ಮೇಳದಲ್ಲಿ ವೃತ್ತಿ ತಿರುಗಾಟ ಆರಂಭಿಸಿದ ನಂತರ ಹಂತ ಹಂತವಾಗಿ ಮೇಲೇರಿ ಮುಂದೆ ಬಡಗಿನ ಪ್ರಖ್ಯಾತ ಮೇಳಗಳಾದ ಸಾಲಿಗ್ರಾಮ ಹಾಗೂ ಪೆರ್ಡೂರು ಮೇಳಗಳಲ್ಲಿ ತಿರುಗಾಟ ಮಾಡಿ ತನ್ನದಾದ ಅಸ್ತಿತ್ವ ತೋರಿಸಿ ಕೊಟ್ಟವರು.

ಹುಡಗೋಡುರವರು ನಡೆದ ಹಾದಿ ನುಣ್ಣನೆಯ ರನ್ ವೇ ಆಗಿರಲಿಲ್ಲ ಬದಲಿಗೆ ಅದೊಂದು ಆಗಷ್ಟೇ ಕೊರೆದು ರಚಿಸಿದ ಕಚ್ಚಾ ರಸ್ತೆ ಆಗಿದ್ದ ಕಾಲವಾಗಿತ್ತು. ಯಾಕೆಂದರೆ 1980-1990 ದಶಕದಲ್ಲಿ ಒಂದನೇ ತಲೆಮಾರಿನ ಸುಪ್ರಸಿದ್ಧ ಕಲಾವಿದರಾದ ಕೆರೆಮನೆ ಸಹೋದರರು ಚಿಟ್ಟಾಣಿ, ಜಲವಳ್ಳಿ, ನಗರ, ಐರೋಡಿ, ಗೋಡೆ, ಆರ್ಗೋಡು, ಕುಮಟಾ, ಬೇಗಾರ್ ಮುಂತಾದ ಮೇರು ಕಲಾವಿದರ ದಂಡೇ ಮೆರೆದು ರಂಗದಲ್ಲಿ ವಿಜೃಂಭಿಸಿ, ಆ ಕಲಾವಿದರು ಕಡೆದಿಟ್ಟ ಪ್ರತೀಯೊಂದು ಪೇಟೆಂಟ್ ಪಾತ್ರಗಳಿಗೆ ಹೊಸ ಭಾಷ್ಯವನ್ನು ಬರೆಯುವುದು ಯುವ ಕಲಾವಿದರಿಗೆ ಅಷ್ಟು ಸುಲಭದ ವಿಚಾರವಾಗಿರಲಿಲ್ಲ. ಅಂತಹ: ಕಾಲಘಟ್ಟದಲ್ಲಿ ಎರಡನೇ ತಲೆಮಾರಿನ ವೇಷಧಾರಿಯಾಗಿ ರಂಗ ಪ್ರವೇಶ ಮಾಡಿದ ಹುಡಗೋಡುರವರು ಆ ಎಲ್ಲ ಹಿರಿಯರ ವೇಷಗಳನ್ನು ಬೆರಗಿನಿಂದಲೇ ನೋಡುತ್ತಾ ರಂಗವೇರಿ ಅವರನ್ನು ಅದರ್ಶವಾಗಿರಿಸಿಕೊಂಡವರು.

ಹುಡಗೋಡುರವರದು ರಂಗ ಪರಿಭಾಷೆಯನ್ನು ಮೀರದ ಅಭಿವ್ಯಕ್ತಿ. ಆವರು ಖಳ ಪಾತ್ರಗಳತ್ತ ಒಲವು ತೋರಿ ಅವುಗಳತ್ತ ವಾಲಿದ್ದೇ ಅಧಿಕ. ಹಾಗಾಗಿ ಅವರು ನಿರ್ವಹಿಸಿದ ಸಾಲ್ವ, ದುಷ್ಟಬುದ್ಧಿ, ಕೌರವ, ಭಸ್ಮಾಸುರ, ಕಂಸ,  ದುಷ್ಟಬುದ್ದಿ, ಕಾರ್ತವೀರ್ಯ, ರಾವಣ, ಭದ್ರಸೇನ ಮುಂತಾದ ಪಾತ್ರಗಳು ರಂಗದಲ್ಲಿ ಅವರದೇ ಆದ ವಿಶಿಷ್ಟವಾದ ಛಾಪು ಮೂಡಿಸಿದೆ. ಒಂದು ಕೋನದಲ್ಲಿ ನೋಡಿದಾಗ ಚಿಟ್ಟಾಣಿಯವರನ್ನು ಇನ್ನೊಂದು ಕೋನದಲ್ಲಿ ನೋಡಿದಾಗ ಗೋಡೆ ನಾರಾಯಣ ಹೆಗ್ಗಡೆಯವರನ್ನು ಪ್ರತಿನಿಧಿಸಿದ್ದೇ ಹೆಚ್ಚು. ಒಟ್ಟಂದದ ಕಲಾಭಿವ್ಯಕ್ತಿಯಲ್ಲಿ ಗೋಡೆಯವರ ಸಂಭಾಷಣೆಯ ಶೈಲಿ, ಧ್ವನಿ ಮುಂತಾದವುಗಳ ಪಡಿಯಚ್ಚು ನಿರ್ವಹಣೆಯನ್ನು ಕಾಣಬಹುದಾಗಿತ್ತು. ಇದಕ್ಕೆ ಕಾರಣವೂ ಗೋಡೆಯವರ ಜೊತೆಗಿನ ಅವರ ಅನನ್ಯ ಒಡನಾಟ ಆಗಿರಲೂ ಬಹುದೇನೋ! ಜೊತೆಗೆ ನೋಡಲೂ ಕೂಡ ಗೋಡೆಯವರ ಹಾಗಿನ ವ್ಯಕ್ತಿಚಿತ್ರವೂ ಹೌದು.

ಪ್ರತಿನಾಯಕ ಪಾತ್ರಗಳನ್ನು ನಿರ್ವಹಿಸಿದಷ್ಟೇ ಸಮರ್ಥವಾಗಿ ನಾಯಕ ಪಾತ್ರಗಳಾದ ಭೀಷ್ಮ, ಅರ್ಜುನ, ಸುಧನ್ವ, ಮದನ, ಚಂದ್ರಹಾಸ ಪಾತ್ರಗಳನ್ನು ನಿರ್ವಹಿಸಿದ ಖ್ಯಾತಿ ಇವರದು. ಯಾವುದೇ ಪಾತ್ರ ಇರಲಿ, ಅದರಲ್ಲಿ ಪರಕಾಯ ಪ್ರವೇಶ ಮಾಡುವ ಕಲೆ ಅವರಿಗೆ ಸಿದ್ಧಿಸಿತ್ತು. ಪಾತ್ರಗಳು ಪೌರಾಣಿಕ ಅಥವಾ ಸಾಮಾಜಿಕ ಯಾವುದೇ ಆಗಿರಲಿ ಅದರ ನಿರ್ವಹಣೆಯಲ್ಲಿ ಯಕ್ಷಾನೀಯ ವೇಷವಾಗಿದ್ದದ್ದು ಇವರ ವಿಶೇಷತೆ. ಇದೇ ಅರ್ಹತೆ ಅವರನ್ನು ಬಡಗುತಿಟ್ಟಿನ ಎರಡನೇ ವೇಷದ ಸ್ಥಾನದ ಎತ್ತರಕ್ಕೆ ಏರಿಸಿದ್ದು.

ಹುಡಗೋಡುರವರು ಆಹಾರ್ಯ, ವಾಚಿಕ, ಆಂಗಿಕ, ಸಾತ್ವಿಕ ಎನ್ನುವ ಚತುರಂಗದ ಅಭಿನಯದಲ್ಲಿ ಸಿದ್ಧಿಯನ್ನು ಯಥೇಚ್ಛವಾಗಿ ಪಡೆದಿದ್ದರು. ಇದಕ್ಕೆ ಕಾರಣ ರಂಗದಲ್ಲಿ ಎದ್ದು ಕಾಣುವಂತಹ ವಿಶಾಲವಾದ ವರ್ಚಸ್ಸಿನ ಮುಖ ಆಯಕಟ್ಟಿನ ದೇಹ ಪ್ರಕೃತಿ, ಸ್ವರ ಗಾಂಭೀರ್ಯ ಅವರಿಗಿದ್ದ ದೈವದತ್ತ ವರವಾಗಿತ್ತು. ಅವರ ವೇಷಕ್ಕೆ ಭಾಗವತನ ನೆಲೆಯಲ್ಲಿ ಒಂದಷ್ಟು ಪದ ಹೇಳಿದ ಅನುಭವದಲ್ಲಿ ಅವರ ವೇಷಗಾರಿಕೆಯಲ್ಲಿ ಕೌರವನಲ್ಲಿಯ ಛಲ, ಕೀಚಕನಲ್ಲಿಯ ವಿರಹ, ಕಾರ್ತ್ಯವೀರ್ಯ ಹಾಗೂ ರಾವಣನಲ್ಲಿಯ ಶೌರ್ಯ, ಸಾಲ್ವನಲ್ಲಿಯ ಶೃಂಗಾರ ರಸೊತ್ಪತ್ತಿಯನ್ನು ಸ್ಪಷ್ಟವಾಗಿ ಕಾಣಬಹುದಿತ್ತು. ಹುಡಗೋಡುರವರು ಪಾತ್ರದ ಸ್ಥಾಯಿ ಭಾವ ತಿಳಿಯದೆ ಈಗಿನ ಒಟ್ಟಾರೆ ಚಾಲು ಕುಣಿತದ ನಾಟ್ಯ ವೈಭವದತ್ತ ಮನಗೊಡದೆ ವಾಚಿಕದಲ್ಲೂ ರಸಭಾವವನ್ನು ಕೆಡಿಸದೆ ಪಾತ್ರ ಕಟ್ಟಿಕೊಡುವ ಜಾಣ್ಮೆ ಪ್ರೌಢಿಮೆ ಅನನ್ಯ.

ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಇವರು ರಾಜಕೀಯದಲ್ಲಿ ಆಸಕ್ತಿ ಹೊಂದಿ ಹುಟ್ಟೂರಾದ ಹಡಿನಬಾಳು ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತಿದ್ದರು. ತನ್ನ ನೇರನಡೆ ನುಡಿಯಿಂದ ನಿಷ್ಟುರವಾದಿಯಾಗಿದ್ದ ಇವರು ರಂಗದಲ್ಲಿ ಬೇಡಿಕೆ ಇರುವಾಗಲೇ ಖಾಯಂ ಮೇಳ ತಿರುಗಾಟವನ್ನು ಸ್ಥಗಿತಗೊಳಿಸಿ, ಅತಿಥಿ ಕಲಾವಿದನ ನೆಲೆಗೆ ತಿರುಗಾಟವನ್ನು ಸೀಮಿತಗೊಳಿಸಿದರೂ ರಂಗದಲ್ಲಿ ಬೇಡಿಕೆ ಕಾಯ್ದು ಕೊಂಡ ಕಲಾವಿದರಾಗಿದ್ದರು. ಹಾಗಾಗಿ ತಾ 10/03/2019 ರಂದು ಜಲವಳ್ಳಿ ಮೇಳದಲ್ಲಿ ಅತಿಥಿ ಕಲಾವಿದರಾಗಿ ಬೈಂದೂರಿನ ಎಳಜಿತ್ ಎಂಬಲ್ಲಿ ನಡೆದ ಭೀಷ್ಮ ವಿಜಯ ಆಖ್ಯಾನದ ಸಾಲ್ವನ ವೇಷ ರಂಗದಲ್ಲಿ ಕುಣಿಯುತ್ತಿರುವಾಗಲೇ ಕುಸಿದು ಸೇರಿದ್ದ ಅಪಾರವಾದ ಅಭಿಮಾನಿಗಳನ್ನೂ, ಕುಟುಂಬಿಕರನ್ನೂ ದುಃಖತಪ್ತರನ್ನಾಗಿಸಿ ಹರಿಪಾದವನ್ನು ಸೇರಿದ್ದು ವಿಷಾದನೀಯ.

ಇನ್ನು 20 ವರ್ಷಗಳಕಾಲ ಸುಲಲಿತವಾಗಿ ರಂಗದಲ್ಲಿ ಜನ ಮನ ರಂಜಿಸುವ ದೇಹಕ್ಷಮತೆ ಇದ್ದ ಹುಡಗೋಡುರವರ ಈ ಅಕಾಲಿಕ ಮರಣ ಯಕ್ಷಗಾನ ಕ್ಷೇತ್ರಕ್ಕೆ ಭರಿಸಲಾರದ ನಷ್ಟವೇ ಸರಿ. ದೇವರಿಗೆ ಈ ರೀತಿ ರಂಗದಲ್ಲಿಯ ಅನರ್ಘ್ಯ ರತ್ನಗಳನ್ನೇ ಪೋಣಿಸಿ ಕೊರಳ ಹಾರವಾಗಿಸುವುದೇ ಪ್ರೀತಿಯೇನೋ.? ಮೃತರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸು ಪ್ರಭು ಅನ್ನುವುದೇ ಪರಮ ಪ್ರಾರ್ಥನೆ.

ಕಿರು ಪರಿಚಯ
ಹೆಸರು: ಚಂದ್ರಹಾಸ ನಾಯ್ಕ್
ಹೆಂಡತಿ: ಕಲಾವತಿ ನಾಯ್ಕ್
ಮಕ್ಕಳು: ಪ್ರದೀಪ, ಸುದೀಪ.
ಊರು:ಹುಡುಗೋಡು, ಹೊನ್ನಾವರ, ಉತ್ತರ ಕನ್ನಡ
ಯಕ್ಷ ಮೇಳ ಪ್ರಾರಂಭ: 2016
ಮೇಳದ ಹೆಸರು: ಕಲಾಶ್ರಿ ಯಕ್ಷಮಿತ್ರ ಮೇಳ

ರಾಜಕೀಯ ರಂಗದಲ್ಲಿಯು ಹೆಸರುವಾಸಿ.  ಇಂದಿಗೂ ಇವರ ಮಗ ಪ್ರದೀಪ್ ನಾಯ್ಕ್ ಇವರು ಮೇಳವನ್ನು ನಡೆಸಿಕೊಂಡು ಬರುತ್ತಿದ್ದಾರೆ.

 

ಸಿಂಚನಾ ಜೈನ್ ಮುಟ್ಟದಬಸದಿ

Visited 336 times, 1 visit(s) today
Close Search Window
Close