ಹಿರಿಯ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಯಕ್ಷಗಾನ ಕಲಾಕ್ಷೇತ್ರದಲ್ಲಿ ಮುಂಚೂಣಿಯ ಕಲಾವಿದರಾಗಿ ಐವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದವರು ಪೆರುವಾಯಿ ನಾರಾಯಣ ಶೆಟ್ಟಿ. ಜಾಬಾಲಿ, ಅರುಣಾಸುರ, ರಕ್ತಬೀಜ, ಕೌರವ, ಕರ್ಣ, ಅರ್ಜುನ, ಅತಿಕಾಯ, ಇಂದ್ರಜಿತು, ಕೋಟಿ ಚೆನ್ನಯದ ಕೋಟಿ ಮೊದಲಾದ ವೇಷಗಳ ನಿರ್ವಹಣೆಯಲ್ಲಿ “ಪೆರುವಾಯಿ ಶೈಲಿ’ ಎಂಬ ಹೊಸ ಹಾದಿಯನ್ನು ನಿರ್ಮಿಸಿದ ಕೀರ್ತಿವಂತ.
ಬಾಲ್ಯ, ಶಿಕ್ಷಣ ಹಾಗೂ ಕಲಾಸೇವೆ
ಕುಂಡಾವು, ಧರ್ಮಸ್ಥಳ, ಕರ್ನಾಟಕ, ಪೊಳಲಿ ರಾಜರಾಜೇಶ್ವರಿ ಮೇಳ, ಕದ್ರಿ, ಕುಂಬಳೆ, ಕುಂಟಾರು, ಕಟೀಲು ಹೀಗೆ ವಿವಿಧ ಯಕ್ಷಗಾನ ಮಂಡಳಿಗಳಲ್ಲಿ ತಿರುಗಾಟ ಮಾಡಿದ ಪೆರುವಾಯಿ ನಾರಾಯಣ ಶೆಟ್ಟಿ ಅವರದು ಬಹುದೊಡ್ಡ ಸಾಧನೆ. ಬಂಟ್ವಾಳ ತಾಲೂಕು ಪೆರುವಾಯಿ ಇವರ ಹುಟ್ಟೂರು. ಮದನಪ್ಪ ಶೆಟ್ಟಿ ಮತ್ತು ಅಬ್ಬಕ್ಕ ಇವರ ತಂದೆ-ತಾಯಿ.
ಶೆಟ್ಟರ ವಿದ್ಯಾಭ್ಯಾಸ 6ನೇ ತರಗತಿಯವರೆಗೆ ಮಾತ್ರ. ಆದರೆ, “ತುಳಸೀ ಜಲಂಧರ’ದ ಜಲಂಧರ, “ತಾಮ್ರ ಧ್ವಜ ಕಾಳಗ’ದ ತಾಮ್ರಧ್ವಜ, “ಕಟೀಲು ಕ್ಷೇತ್ರ ಮಹಾತ್ಮೆಯ ಅರುಣಾಸುರ ಮೊದಲಾದ ಪಾತ್ರಗಳಲ್ಲಿ ಅವರ ಅರ್ಥ ವಿಶ್ಲೇಷಣೆಯನ್ನು ಕೇಳಿದವರಿಗೆ ಶಾಲಾ ವಿದ್ಯಾಭ್ಯಾಸಕ್ಕೂ ಜ್ಞಾನಕ್ಕೂ ಯಾವ ಸಂಬಂಧವೂ ಇಲ್ಲ ಎಂಬುದು ಅರಿವಾಗಿ ಅಚ್ಚರಿಯಾಗದೆ ಇರದು. ಎಳೆ ವಯಸ್ಸಿನಲ್ಲೆ ಯಕ್ಷಗಾನದತ್ತ ಆಕರ್ಷಿತರಾದ ಶೆಟ್ಟರು ಕುಂಡಾವು ಮೇಳದಲ್ಲಿ ರಂಗಪ್ರವೇಶ ಮಾಡಿದರು. ಬಾಯಾರು ಐತಪ್ಪ ಶೆಟ್ಟಿ, ಕುಡಾಣ ಗೋಪಾಲಕೃಷ್ಣ ಭಟ್, ಅಳಿಕೆ ರಾಮಯ್ಯ ರೈ ಈ ಗುರುತ್ರಯರಿಂದ ಯಕ್ಷಗಾನ ಅಭ್ಯಾಸ ಮಾಡಿಕೊಂಡರು. ಇವರಿಗೆ ಕರುವೊಳು ದೇರಣ್ಣ ಶೆಟ್ಟಿ ಗೆಜ್ಜೆ ನೀಡಿ ಪ್ರೋತ್ಸಾಹಿಸಿದವರು.
ಕುರಿಯ ವಿಠಲ ಶಾಸ್ತ್ರಿಯವರಿ೦ದ ಭೇಷ್
ಕುರಿಯ ವಿಠಲ ಶಾಸ್ತ್ರಿಯವರ ನೇತೃತ್ವದ ಯಕ್ಷಗಾನ ತಂಡದಿಂದ ಕುರುಕ್ಷೇತ್ರ ಎಂಬ ಕಥಾನಕದ ಪ್ರದರ್ಶನವನ್ನು ಹಿರಿಯ ಸಂಶೋಧಕಿ ಮಾರ್ಥಾ ಆಸ್ಟನ್ ಏರ್ಪಡಿಸಿದ್ದರು. ಯಕ್ಷಗಾನದ ಬಗ್ಗೆ ಅಧ್ಯಯನಾರ್ಥವಾಗಿ ಕೈಗೊಂಡ ಈ ಪ್ರದರ್ಶನದಲ್ಲಿ ಹೊಸಹಿತ್ಲು ಮಹಾಲಿಂಗ ಭಟ್ಟರ ಅಭಿಮನ್ಯುವಿನ ಪಾತ್ರಕ್ಕೆ ಸಾರಥಿಯಾಗಿ ಪೆರುವಾಯಿ ನಾರಾಯಣ ಶೆಟ್ಟರು ವೇಷ ಮಾಡಿದ್ದರು. ಇವರ ಪ್ರತಿಭೆಯನ್ನು ಮೆಚ್ಚಿಕೊಂಡ ವಿಠಲ ಶಾಸ್ತ್ರಿಯವರು ಅವರನ್ನು ಧರ್ಮಸ್ಥಳ ಮೇಳಕ್ಕೆ ಸೇರಿಸಿದ್ದು ಅವರ ಜೀವನದಲ್ಲಿ ದೊರೆತ ಬಹುದೊಡ್ಡ ತಿರುವು.
ಎರಡನೇ ಪುಂಡು ವೇಷಧಾರಿಯಾಗಿ ತೆಂಕುತಿಟ್ಟಿನ ಅಗ್ರಮಾನ್ಯ ಕಲಾಮಂಡಳಿಯಲ್ಲಿ ಸೇವೆ ಸಲ್ಲಿಸುವ ಸುಯೋಗ ಇವರದಾಯಿತು. ಕಟೀಲು ಮೇಳವೊಂದರಲ್ಲಿಯೇ 23 ವರ್ಷ ತಿರುಗಾಟ ಮಾಡಿದ ಇವರಿಗೆ ದೇವಿ ಮಹಾತ್ಮೆಯ ರಕ್ತಬೀಜ, ಕಟೀಲು ಕ್ಷೇತ್ರ ಮಹಾತ್ಮೆಯ ಅರುಣಾಸುರ, ವಿಶೇಷವಾಗಿ ಗದಾಯುದ್ಧದ ಕೌರವ ಪ್ರಸಿದ್ಧಿಯನ್ನು ತಂದುಕೊಟ್ಟಿವೆ. ಪೊಳಲಿ ರಾಜರಾಜೇಶ್ವರಿ ಮೇಳದಲ್ಲಿ (ತೆಂಕು-ಬಡಗು ಎರಡೂ ಶೈಲಿಯ ಆ ಕಾಲದ ಮೇಳ) ಕೂಡ ಇವರು 13 ವರ್ಷ ಸೇವೆ ಸಲ್ಲಿಸಿದ್ದಾರೆ.
Visited 96 times, 1 visit(s) today